ಬೆಂಗಳೂರು:''ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಲಂಚದ ಆರೋಪ ಮಾಡಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎನ್ನಲಾದ ಪತ್ರದಲ್ಲಿರುವ ಸಹಿಯ ಸತ್ಯಾಸತ್ಯತೆ ಪರಿಶೀಲಿಸಲು ವಿಧಿವಿಜ್ಞಾನ ಪ್ರಯೋಗಾಲಯದಿಂದ ತನಿಖೆ ಮಾಡಿಸಬೇಕು'' ಎಂದು ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
''ಕೃಷಿ ಸಚಿವ ಚಲುವರಾಯಸ್ವಾಮಿ ಅವರ ವಿರುದ್ಧ ಲಂಚದ ಸುಳ್ಳು ಆರೋಪ ಮಾಡಿ ಅವರ ಹಾಗೂ ಕಾಂಗ್ರೆಸ್ ಪಕ್ಷದ ತೇಜೋವಧೆಗೆ ಕೆಲವರು ಪ್ರಯತ್ನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ನಕಲಿ ಪತ್ರ ಸಲ್ಲಿಸಿದವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು'' ಎಂದು ಮಂಗಳವಾರ ವಿಧಾನಸೌಧದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ''ಕೃಷಿ ಸಚಿವರ ವಿರುದ್ಧ ಆರೋಪ ಮಾಡಿದ್ದಾರೆ ಎನ್ನಲಾದ ದೂರಿನ ಪತ್ರದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ'' ಎಂದು ಅವರು ಹೇಳಿದರು.
ಉನ್ನತ ಮಟ್ಟದ ತನಿಖೆಗೆ ಆಗ್ರಹ:''ಪತ್ರದಲ್ಲಿರುವ ಒಕ್ಕಣೆಯನ್ನು ನೋಡಿದರೆ ಆ ಪತ್ರದ ಹಿಂದೆ ಯಾರಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಪತ್ರದಲ್ಲಿ ನಮ್ಮ ಶಾಸಕರಿದ್ದಾಗ ಎಂಬ ಒಕ್ಕಣೆ ಇದೆ. ಅದನ್ನು ನೋಡಿದರೆ ಮಂಡ್ಯ ಜಿಲ್ಲೆಯಲ್ಲಿ ಈ ಹಿಂದೆ ಯಾವ ಶಾಸಕರು ಇದ್ದರು ಎಂಬುದು ಅರ್ಥವಾಗುತ್ತದೆ. ಈ ಪತ್ರದ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಲ್ಲಿ ಮನವಿ ಮಾಡಿದ್ದು, ಈಗಾಗಲೇ ಸಿಐಡಿ ತನಿಖೆಗೆ ಕೊಟ್ಟಿದ್ದಾರೆ'' ಎಂದು ತಿಳಿಸಿದರು.