ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಶಾಸಕ ಸಿ.ಎನ್.ಬಾಲಕೃಷ್ಣ ಆಯ್ಕೆಯಾಗಿದ್ದಾರೆ.
ಇಂದು ಸಂಘದ ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿ.ಎನ್. ಬಾಲಕೃಷ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಟಿ.ಕೋನಪ್ಪ ರೆಡ್ಡಿ ಅವರು ತಲಾ 20 ಮತಗಳನ್ನು ಹಂಚಿಕೊಂಡು ಚುನಾಯಿತರಾದರು.
ರಾಜ್ಯ ಒಕ್ಕಲಿಗರ ಸಂಘದ ಚುನಾವಣಾ ಫಲಿತಾಂಶ ಇನ್ನು, ಸಂಘದ ಉಪಾಧ್ಯಕ್ಷರಾಗಿ ಡಾ.ಕೆ.ವಿ.ರೇಣುಕಾಪ್ರಸಾದ್, ಹನುಮಂತಯ್ಯ ಆಯ್ಕೆಯಾದರೆ ಖಜಾಂಚಿಯಾಗಿ ಆರ್. ಪ್ರಕಾಶ್ ಮತ್ತು ಸಹಾಯಕ ಕಾರ್ಯದರ್ಶಿಯಾಗಿ ರಾಘವೇಂದ್ರ ಆಯ್ಕೆಯಾಗಿದ್ದಾರೆ.
ಒಕ್ಕಲಿಗರ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ನಿರ್ದೇಶಕರು ಹಾಗೂ ಪದಾಧಿಕಾರಿಗಳ ಬೆಂಬಲಿಗರು ಅಭಿನಂದಿಸಿದರು. ಡಿಸೆಂಬರ್ 12 ರಂದು ಚುನಾವಣೆಯಲ್ಲಿ ಆಯ್ಕೆಯಾಗಿದ್ದ 35 ಕಾರ್ಯಕಾರಿ ಸಮಿತಿ ಸದಸ್ಯರ ನಡುವೆ ಪದಾಧಿಕಾರಿಗಳ ಚುನಾವಣೆ ನಡೆದಿತ್ತು.
ಇದನ್ನೂ ಓದಿ:ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೇರಿ ಕೊರಟಗೆರೆಯಲ್ಲಿ ಒಂದೇ ದಿನ ಮೂವರು ಆತ್ಮಹತ್ಯೆ..!
ಪದಾಧಿಕಾರಿಗಳ ಚುನಾವಣೆಯಲ್ಲಿ ಆಯ್ಕೆಯಾಗಲು ಕನಿಷ್ಠ 18 ಕಾರ್ಯಕಾರಿ ಸದಸ್ಯರ ಮತದ ಅವಶ್ಯಕತೆ ಇತ್ತು. ಸಿ.ಎನ್.ಬಾಲಕೃಷ್ಣ ಹಾಗೂ ಕೆಂಚಪ್ಪಗೌಡರ ತಂಡದ ನಿರ್ದೇಶಕರು ಪದಾಧಿಕಾರಿಗಳ ಚುನಾವಣೆಗೆ ಸ್ಪರ್ಧಿಸಿದ್ದರು. ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಾಜಿ ಅಧ್ಯಕ್ಷ ಬಿ. ಕೆಂಚಪ್ಪಗೌಡ 14 ಮತ ಪಡೆದು ಸೋಲುಂಡರು. ಬಾಲಕೃಷ್ಣ ಅವರ ತಂಡದವರು ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.