ಬೆಂಗಳೂರು: ಕರ್ನಾಟಕದ ನಂತರ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಅದಕ್ಕಾಗಿ ಮಿಷನ್ ದಕ್ಷಿಣ್ ಯೋಜನೆ ಅಡಿ ಪಕ್ಷ ಸಂಘಟನೆಗೆ ನಿರ್ಧರಿಸಲಾಗಿದ್ದು,ಮೋದಿ ಕರೆಯಂತೆ ಸ್ನೇಹ ಯಾತ್ರೆ ಮೂಲಕ ಬಿಜೆಪಿ ಯೋಚನೆ - ಯೋಜನೆ ಜನರಿಗೆ ಮುಟ್ಟಿಸಿ ದಕ್ಷಿಣ ಭಾರತದಲ್ಲೂ ಕಮಲ ಅರಳಿಸುವ ಸಂಕಲ್ಪ ಮಾಡಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತೆಲಂಗಾಣದ ಭಾಗ್ಯನಗರವಾದ ಈಗಿನ ಹೈದರಾಬಾದ್‌ನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನೇತೃತ್ವದಲ್ಲಿ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ, ವಿವಿಧ ರಾಜ್ಯದ ಸಿಎಂಗಳು, ಅಧ್ಯಕ್ಷರು,ಪದಾಧಿಕಾರಿಗಳು ಭಾಗಿಯಾಗಿದ್ದು, ಎರಡು ದಿನಗಳ ಕಾಲ ಪ್ರಧಾನಿಗಳು ಮಾರ್ಗದರ್ಶನ ಮಾಡಿದರು. ದಕ್ಷಿಣ ಭಾರತದ ರಾಜ್ಯದಲ್ಲಿ ಬಿಜೆಪಿ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ. ಕರ್ನಾಟಕದ ನಂತರ ತೆಲಂಗಾಣದಲ್ಲಿ ಅಧಿಕಾರಕ್ಕೆ ಬರೋದು ಉಪಚುನಾವಣೆಯಲ್ಲಿ ವ್ಯಕ್ತವಾಗಿದೆ. ದೊಡ್ಡ ಪ್ರಮಾಣದಲ್ಲಿ ಯುವಕರು, ಮಹಿಳೆಯರು ಯಾರ್ಲಿಯಲ್ಲಿ ಭಾಗಿಯಾಗಿದ್ದು, ಸ್ಪಷ್ಟ ಸಂದೇಶ ಸಿಕ್ಕಂತಾಗಿದೆ ಎಂದು ವಿವರಿಸಿದರು.
ಕರ್ನಾಟಕದ ನಂತರ ತೆಲಂಗಾಣ ಬಿಜೆಪಿ ಮಡಿಲಿಗೆ ಬೀಳಲಿದೆ. ತಮಿಳುನಾಡಿನಲ್ಲೂ ಬಿಜೆಪಿ ಬೆಳವಣಿಗೆ ಆಶಾದಾಯಕವಾಗಿದೆ. ರಾಜ್ಯಾಧ್ಯಕ್ಷ ಅಣ್ಣಮಲೈ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುತ್ತಿದೆ. ತಮಿಳುನಾಡಿನ ಜನ ಬದಲಾವಣೆ ಬಯಸುತ್ತಿರುವುದು ಅನುಭವಕ್ಕೆ ಬರುತ್ತಿದೆ. ಪಾಂಡಿಚೇರಿಯಲ್ಲಿ ಈಗಾಗಲೇ ಅಧಿಕಾರದಲ್ಲಿ ಪಾಲುದಾರರಾಗಿದ್ದೇವೆ. ಆಂಧ್ರದಲ್ಲಿ ಪ್ರಯತ್ನ ಪಡಬೇಕಿದೆ ಎಂದರು.
ಮುರ್ಮು ಮತ ಯಾಚನೆಗೆ ರಾಜ್ಯ ಪ್ರವಾಸ:ಕಾಂಗ್ರೆಸ್ ಒಳಗೆ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲ. ಅದರ ವಿರುದ್ಧ ಧ್ವನಿ ಎತ್ತಿದವರಿಗೆ ಮೂಲೆ ಸೇರಿಸುವ ಕೆಲಸ ಮಾಡಿದ್ದಾರೆ. ಅನೇಕ ಪಕ್ಷಗಳಿಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಆದರೆ, ಬಿಜೆಪಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡುವ ಕೆಲಸ ಮಾಡಿದೆ. ಎನ್.ಡಿ.ಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ರಾಜ್ಯಕ್ಕೆ ಬರುತ್ತಿದ್ದಾರೆ. ಮೊದಲಬಾರಿ ರಾಷ್ಟ್ರಪತಿ ಅಭ್ಯರ್ಥಿ ಘೋಷಣೆ ಮಾಡುವ ಅವಕಾಶ ದೊರೆತಾಗ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಅಬ್ದುಲ್ ಕಲಾಂ ಅವರನ್ನ ಆಯ್ಕೆ ಮಾಡಿತು.
ಆ ಆಯ್ಕೆಗೆ ಕೆಲವು ಪಕ್ಷದವರನ್ನ ಹೊರತುಪಡಿಸಿ ನಮ್ಮಲ್ಲೇ ಒಬ್ಬನನ್ನ ಆಯ್ಕೆ ಮಾಡಿದ್ದರು ಎಂದು ಇಡೀ ದೇಶದ ಜನ ಖುಷಿ ಪಟ್ಟರು. ದುರ್ದೈವ ಅವರನ್ನ ಎರಡನೇ ಬಾರಿ ಆಯ್ಕೆ ಮಾಡಲು ಅವಕಾಶ ಸಿಗಲಿಲ್ಲ. ಮತ್ತೊಮ್ಮೆ ಅವಕಾಶ ಸಿಕ್ಕಾಗ ರಾಮನಾಥ್ ಕೋವಿಂದ್ ಅವರಿಗೆ ಅವಕಾಶ ನೀಡಿತ್ತು.
ಈಗ ಆದಿವಾಸಿ ಮಹಿಳೆ, ಬಡತನದಿಂದ ಬದುಕು ಕಟ್ಟಿಕೊಂಡವರು, ರಾಜ್ಯಪಾಲರಾಗಿ ಅನುಭವದ ಗಣಿಯಾಗಿರೋ ದ್ರೌಪದಿ ಮುರ್ಮು ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ, ಎನ್.ಡಿ.ಎ ಮೂಲಕ ಆಯ್ಕೆ ಮಾಡಿದ್ದೇವೆ. ಮತ ಕೇಳಲು ಸದ್ಯದಲ್ಲೇ ಬರುತ್ತಿದ್ದಾರೆ. ಈಗಿರೋ ಮಾಹಿತಿ ಪ್ರಕಾರ ಅವರು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ಹೊರಹಾಕಿದರು.
ಸಿದ್ದರಾಮಯ್ಯಗೆ ಉಲ್ಟಾ ಮಚ್ಚೆ ಇದೆ:ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ 120ಸ್ಥಾನ ಗೆಲ್ಲುವ ಹೇಳಿಕೆ ನೀಡಿದೆ. ಖಾಲಿ ಡಬ್ಬ ಜಾಸ್ತಿ ಸೌಂಡ್ ಮಾಡುತ್ತದೆ. ಗೋವಾದಲ್ಲಿ ಕಾಂಗ್ರೆಸ್ ಅಧಿಕಾರವನ್ನೂ ಹಂಚಿಕೊಂಡು ಬಿಟ್ಟಿದ್ದರು. ಯುಪಿಯಲ್ಲಿ ಏನಾಯ್ತು? ಮೇ ಲಡಕೀ ಹೂ, ಲಡ್ ಸಕ್ತಾಹೂ ಅಂದರು ಅದು ಏನಾಯ್ತು? ನಿಂತ ಸ್ಥಾನಗಳೆಷ್ಟು ಗೆದ್ದ ಸೀಟುಗಳೆಷ್ಟು? ಸಿದ್ದರಾಮಯ್ಯ ಹೇಳೋದೆಲ್ಲಾ ಉಲ್ಟಾ ಆಗುತ್ತದೆ.
ಮೋದಿ ಅವರಪ್ಪನಾಣೆ ಪ್ರಧಾನಿ ಆಗಲ್ಲ ಅಂತ ಹೇಳಿದ್ದರು. ನಾನೇ ಮುಂದಿನ ಸಿಎಂ ಅಂದರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು ಎಂದ ರವಿ, ಕೆಲವರಿಗೆ ಉಲ್ಟಾ ಮಚ್ಚೆ ಇರುತ್ತದೆ, ಅದು ಸಿದ್ದರಾಮಯ್ಯ ಅವರಿಗಿದೆ ಅನಿಸುತ್ತಿದೆ. ಅವರು ಹೇಳೋದೆಲ್ಲಾ ಉಲ್ಟಾ ಆಗುತ್ತದೆ ಎಂದು ವ್ಯಂಗ್ಯವಾಡಿದರು.