ಬೆಂಗಳೂರು: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಆತನದ್ದೇ ಮನೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆಗೀಡಾಗಿ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಡರಾತ್ರಿ ನಾಯಂಡಹಳ್ಳಿಯ ಚೆಟ್ಟಿಸ್ ಪೆಟ್ರೋಲ್ ಬಂಕ್ ಸಮೀಪದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಲಿಯಾಖತ್ ಅಲಿಖಾನ್(44) ಕೊಲೆಯಾದ ವ್ಯಕ್ತಿ.
ಗಂಗೊಂಡನಹಳ್ಳಿ ಬಳಿ ಜಾಹೀರಾತು ಪ್ರಿಂಟಿಂಗ್ ಏಜೆನ್ಸಿ ಹೊಂದಿದ್ದ ಲಿಯಾಕತ್ ಅಲಿಖಾನ್, ಪ್ರತಿ ದಿನ ರಾತ್ರಿ ನಾಗರ ಭಾವಿಯಲ್ಲಿರುವ ಜಿಮ್ ಸೆಷನ್ ಮುಗಿಸಿಕೊಂಡು ಮನೆಗೆ ಬರುತ್ತಿದ್ದ. ತಡರಾತ್ರಿ ಮನೆಗೆ ಬರದಿದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ರಾತ್ರಿ 2 ಗಂಟೆ ಸುಮಾರಿಗೆ ನಾಯಂಡಹಳ್ಳಿಯಲ್ಲಿರುವ ಲಿಯಾಖತ್ ಅವರಿಗೆ ಸೇರಿದ ಮತ್ತೊಂದು ಮನೆಗೆ ತೆರಳಿ ಪರಿಶೀಲಿಸಿದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಿಯಾಖತ್ ಅವರಿಗೆ ಲಕ್ಷಾಂತರ ರೂ. ಹಣ ಕೊಡಬೇಕಿದ್ದ ಆತನ ಸ್ನೇಹಿತರಾದ ವಾಸಿಂ, ಜೋಹರ್ ಹಾಗೂ ಆತನ ಜೊತೆಗಿರುತ್ತಿದ್ದ ಇಲಿಯಾಸ್ ಎಂಬಾತನ ವಿರುದ್ಧ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಚಂದ್ರಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಚಂದ್ರಾಲೇಔಟ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪರಿಚಿತನನ್ನು ಹತ್ಯೆಗೈದಿದ್ದ ಆರೋಪಿಯ ಬಂಧನ: ಕುಡಿದ ಅಮಲಿನಲ್ಲಿ ಪರಿಚಿತನನ್ನೇ ಹತ್ಯೆಗೈದಿದ್ದ ಆರೋಪಿಯನ್ನು ಇತ್ತೀಚೆಗೆ ವರ್ತೂರು ಠಾಣಾ ಪೊಲೀಸರು ಬಂಧಿಸಿದ್ಧರು. ಶ್ರೀಧರ್ ಬಂಧಿತ ಆರೋಪಿ. ಫೆ.11ರ ರಾತ್ರಿ ವರ್ತೂರು ಠಾಣಾ ವ್ಯಾಪ್ತಿಯ ಹಲಸಹಳ್ಳಿ ಮುಖ್ಯ ರಸ್ತೆಯಲ್ಲಿರುವ ಎಸ್ಎಸ್ಎಸ್ ಬಾರ್ನಲ್ಲಿ ಮುನಿಯಪ್ಪ (45) ಎಂಬಾತನನ್ನ ಮಾರಕಾಸ್ತ್ರಗಳಿಂದ ಹೊಡೆದು ಕೊಲೆಗೈಯ್ಯಲಾಗಿತ್ತು. ಘಟನೆಯ ಸಿಸಿಟಿವಿ ದೃಶ್ಯಗಳು ಇದೀಗ ಲಭ್ಯವಾಗಿದ್ದವು. ಆರೋಪಿ ಶ್ರೀಧರ್ ಮತ್ತು ಮೃತ ಮುನಿಯಪ್ಪ ಇಬ್ಬರೂ ಒಂದೇ ಏರಿಯಾದಲ್ಲಿ ವಾಸವಿದ್ದವರು. ಘಟನೆಯ ದಿನ ರಾತ್ರಿ ಬಾರ್ನಲ್ಲಿ ಮದ್ಯಪಾನ ಮಾಡಿದ ನಂತರ ಇಬ್ಬರೂ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಸಿಟ್ಟಿಗೆದ್ದ ಶ್ರೀಧರ್, ಮುನಿಯಪ್ಪನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. ಪರಿಣಾಮ ಮುನಿಯಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ವರ್ತೂರು ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಇದನ್ನೂ ಓದಿ:ಬೆಂಗಳೂರು: ಮದ್ಯದ ಅಮಲಿನಲ್ಲಿ ಪರಿಚಿತನನ್ನು ಹತ್ಯೆಗೈದಿದ್ದ ಆರೋಪಿಯ ಬಂಧನ