ಬೆಂಗಳೂರು : ವಿಧಾನಸಭಾ ಚುನಾವಣೆಯ ಕಾವೇರುತ್ತಿದ್ದಂತೆ ಪಕ್ಷಾಂತರ ಪರ್ವವೂ ಶುರುವಾಗಿದೆ. ರಾಮನಗರದಲ್ಲಿಂದು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ. ರಾಮನಗರ ನಗರಸಭೆಯ ಮಾಜಿ ಸದಸ್ಯ ಆರಿಫ್ ಖುರೇಶಿ ಹಾಗೂ ಫಯಾಜ್ ಪಾಷಾ ಜೆಡಿಎಸ್ ಸೇರಿದವರಲ್ಲಿ ಪ್ರಮುಖರು.
ಇದನ್ನೂ ಓದಿ :ಚನ್ನಪಟ್ಟಣ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುತ್ತೇನೆ: ಹೆಚ್ ಡಿ ಕುಮಾರಸ್ವಾಮಿ ಘೋಷಣೆ
ಬೆಂಗಳೂರಿನಲ್ಲಿರುವ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಇಂದು ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಕೆ.ಎನ್.ತಿಪ್ಪೇಸ್ವಾಮಿ ಅವರು ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ರಾಮನಗರ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬಲವಾಗಿ ಬೆಳೆದಿದ್ದು, ಪಂಚರತ್ನ ರಥಯಾತ್ರೆ ಯಶಸ್ವಿಯಾದ ನಂತರ ರಾಜ್ಯದಲ್ಲಿ ಪಕ್ಷದ ಪರವಾಗಿ ಅಲೆ ಎದ್ದಿದೆ. ಎಲ್ಲೆಡೆ ನಮ್ಮ ಅಭ್ಯರ್ಥಿಗಳ ಬಗ್ಗೆ ಜನರಿಗೆ ವಿಶ್ವಾಸವಿದೆ. ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಉತ್ತಮ ಸಾಧನೆ ಮಾಡಲಿದೆ. ದೇವೇಗೌಡರಿಗೆ ಮತ್ತು ನನಗೆ ರಾಜಕೀಯ ಶಕ್ತಿ ನೀಡಿದ ಜಿಲ್ಲೆ ಇದು. ಜಿಲ್ಲೆಯ ಅಭಿವೃದ್ಧಿಗೆ ನಾನು ಶಕ್ತಿಮೀರಿ ಶ್ರಮಿಸಿದ್ದೇನೆ ಎಂದರು.
ಇದನ್ನೂ ಓದಿ :ಪಕ್ಷ ಬಯಸಿದರೆ ನಾನೇ ಸ್ಪರ್ಧೆಯಿಂದ ಹಿಂದೆ ಸರಿಯುವೆ: ನಿಖಿಲ್ ಕುಮಾರಸ್ವಾಮಿ
ಆರಿಫ್ ಖುರೇಶಿ ಹಾಗೂ ಫಯಾಜ್ ಪಾಷಾ ಮಾತನಾಡಿ, ಕುಮಾರಸ್ವಾಮಿ ಅವರ ನಾಯಕತ್ವ ಹಾಗೂ ಜೆಡಿಎಸ್ ಪಕ್ಷದ ಜನಪರ ನೀತಿಗಳನ್ನು ಒಪ್ಪಿ ಪಕ್ಷಕ್ಕೆ ಸೇರಿದ್ದೇವೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಾಮಾಣಿಕವಾಗಿ ಸಹಾಯ ಹಸ್ತ ನೀಡಿದ ಏಕೈಕ ಪಕ್ಷ ಜೆಡಿಎಸ್. ಹೀಗಾಗಿ ನಾವಿಬ್ಬರೂ ಪಕ್ಷ ಸೇರಿದ್ದೇವೆ ಎಂದರು. ಈ ಬಾರಿ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲು ನಾವು ಶ್ರಮಿಸುತ್ತೇವೆ ಎಂದು ಇದೇ ವೇಳೆ ಹೇಳಿದರು.
ಇದನ್ನೂ ಓದಿ :ಮೊದಲ ಪಟ್ಟಿಯಲ್ಲಿ ಬಾರದ ಹೆಸರು.. ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಚನ್ನಪಟ್ಟಣದ ಪ್ರಸನ್ನ ಪಿ ಗೌಡ