ಬೆಂಗಳೂರು: ಕೋವಿಡ್ ಕಾರಣದಿಂದ ಮನೆ ನಿರ್ಮಾಣ ವಿಳಂಬವಾಗಿದೆ. 2022 ನವೆಂಬರ್ ಅಂತ್ಯದ ಒಳಗೆ 80 ಸಾವಿರ ಮನೆ ಹಂಚಿಕೆ ಪೂರ್ಣಗೊಳಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು. ಒಂದು ಲಕ್ಷ ಬಹುಮಹಡಿ ಮನೆಗಳ ಯೋಜನೆಯ ಅನುಷ್ಠಾನ ಕುರಿತಂತೆ ವಿಕಾಸಸೌಧದಲ್ಲಿ ಇಂದು ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಕೋವಿಡ್ನಿಂದ ಒಂದು ಲಕ್ಷ ಮನೆಗಳ ನಿರ್ಮಾಣ ಕಾರ್ಯ ವಿಳಂಬವಾಗಿತ್ತು. 515 ಎಕರೆ ಜಾಗ ಕಂದಾಯ ಇಲಾಖೆಯಿಂದ ಪಡೆದಿದ್ದೇವೆ. 42,361 ಸಾವಿರ ಮನೆಗಳು ನಿರ್ಮಾಣ ಹಂತದಲ್ಲಿವೆ. ಆಗಸ್ಟ್ 15 ರಂದು ರಾಜೀವ್ ಗಾಂಧಿ ವಸತಿ ನಿಗಮದಿಂದ 5 ಸಾವಿರ ಮನೆಗಳನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಫಲಾನುಭವಿಗಳ ಆಯ್ಕೆಗೆ ಹಿಂದೆ 87 ಸಾವಿರ ಆದಾಯ ನಿಗದಿಪಡಿಸಲಾಗಿತ್ತು. 65 ಸಾವಿರ ಕುಟುಂಬಗಳಿಗೆ ಆಯ್ಕೆ ಪತ್ರ ಹಿಂದೆ ನೀಡಲಾಗಿತ್ತು. ಒಂದಿಂಚು ಜಾಗವನ್ನು ಹಿಂದಿನ ಸರ್ಕಾರ ತೆಗೆದುಕೊಂಡಿರಲಿಲ್ಲ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 46 ಸಾವಿರ ಮನೆ ಪ್ರಾರಂಭ ಮಾಡಿದ್ದೇವೆ. ಒಂದು ಲಕ್ಷ ಮನೆಗಳ ನಿರ್ಮಾಣ ಗುರಿ ತಲುಪಲು 2022 ನವೆಂಬರ್ ತಿಂಗಳ ಒಳಗೆ 80 ಸಾವಿರ ಮನೆಗಳನ್ನು ಬೆಂಗಳೂರು ನಗರ ಜಿಲ್ಲೆಯ ಅರ್ಹರಿಗೆ ನೀಡುವ ವಿವಿಧ ಕೆಲಸ ಪ್ರಾರಂಭವಾಗಿದೆ. ಬಿಡಿಎ ವ್ಯಾಪ್ತಿಯನ್ನು ಮೀರಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಮನೆಗಳ ನಿರ್ಮಾಣ ಮಾಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.
ಗುತ್ತಿಗೆದಾರರ ಕಾರ್ಯವೈಖರಿ ಬಗ್ಗೆಯೂ ಗಮನ ಹರಿಸುವಂತೆ ಸೂಚನೆ ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಚಿಂತನೆಗೆ, ಯಡಿಯೂರಪ್ಪ ಸರ್ಕಾರಕ್ಕೆ ಕೈ ಜೋಡಿಸುವುದು ನಮ್ಮ ಉದ್ದೇಶ. ಯಾರಿಗೆ ಅವಶ್ಯಕತೆ ಇದೆಯೋ ಅಂಥವರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದರು.