ಬೆಂಗಳೂರು:ಕೋವಿಡ್ ಸೋಂಕಿತರಿಗೆ ಶೇ.50 ರಷ್ಟು ಹಾಸಿಗೆ ಮೀಸಲಿಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿದ್ದು ಇನ್ನೊಂದು ವಾರದಲ್ಲಿ ಹಾಸಿಗೆಗಳನ್ನು ಒದಗಿಸಲು ಸಮ್ಮತಿಸಿವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಖಾಸಗಿ ಆಸ್ಪತ್ರೆಗಳ ಫನಾ ಸಂಘಟನೆ ಜೊತೆ ಸಚಿವ ಸುಧಾಕರ್ ವಿಡಿಯೋ ಸಂವಾದ ನಡೆಸಿದರು. ಕೋವಿಡ್ ರೋಗಿಗಳಿಗೆ ಹಾಸಿಗೆ ಮೀಸಲಿರಿಸುವ ಹಾಗೂ ಇತರೆ ಸೌಲಭ್ಯಗಳ ಕುರಿತು ಸಮಾಲೋಚನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ಸಂಖ್ಯೆ ದಿನನಿತ್ಯ ಹೆಚ್ಚುತ್ತಿದೆ. ನಾನ್ ಕೋವಿಡ್ ಇದ್ದರೂ ತುರ್ತು ಪರಿಸ್ಥಿತಿ ಇರುವುದಿಲ್ಲ. ಹಾಗಾಗಿ ಕೋವಿಡ್ ಸೋಂಕಿತರಿಗೆ ಹಾಸಿಗೆ ಮೀಸಲಿಡಲು ಮನವಿ ಮಾಡಿದ್ದೇವೆ. ಒಂದು ವಾರದ ಒಳಗೆ ಶೇ.50 ರಷ್ಟು ಹಾಸಿಗೆ ಕೊಡಲು ಒಪ್ಪಿದ್ದಾರೆ ಎಂದರು.
ಇದನ್ನೂ ಓದಿ:ಬೆಂಗಳೂರಲ್ಲಿಂದು 6,574 ಕೋವಿಡ್ ಕೇಸ್ ದೃಢ: ಬಿಬಿಎಂಪಿ ವಲಯದಲ್ಲೇ ಹೆಚ್ಚು ಸೋಂಕಿತರು ಪತ್ತೆ
ಅಲ್ಪ ರೋಗದ ಲಕ್ಷಣ ಅಥವಾ ಯಾವುದೇ ರೋಗದ ಲಕ್ಷಣ ಇಲ್ಲದವರು ಆಸ್ಪತ್ರೆಯಲ್ಲಿ ಇರಬೇಕು ಅಂತಾ ಬಯಸುವವರಿಗೆ ಹೋಟೆಲ್‌ನಲ್ಲಿ ಇರಲು ಸೂಚನೆ ನೀಡಲಾಗಿದೆ. ಕೋವಿಡ್ ಇರೋರಿಗೆ ಆತಂಕ ಇದ್ದರೆ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲು ಸೂಚನೆ ನೀಡಿದ್ದು, ದೊಡ್ಡ ಕಾರ್ಪೋರೇಟ್ ಆಸ್ಪತ್ರೆಯವರು ಹೋಟೆಲ್‌ಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಬೇಕು. ಸೋಂಕಿತರ ಬಗ್ಗೆ ಅವರೇ ನಿಗಾ ಇಟ್ಟು ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಇದರಿಂದ ಆಸ್ಪತ್ರೆಯಲ್ಲಿ ಸಿಗುವ ಹಾಸಿಗೆಗಳು ಅನಿವಾರ್ಯ ಇರುವವರಿಗೆ ಲಭ್ಯವಾಗಿ ಅನುಕೂಲವಾಗಲಿದೆ ಎಂದು ಹೇಳಿದರು.
ರೆಮಿಡಿಸಿವರ್ ಕೊರತೆ ಇಲ್ಲ: ಇಡೀ ದೇಶದಲ್ಲಿ ಕೊರೊನಾ ಚಿಕಿತ್ಸೆಗೆ ರೆಮಿಡಿಸಿವರ್ ಅವಶ್ಯಕತೆ ಇದೆ. ಅದರ ತಯಾರಿಕೆ ಕಡಿಮೆಯಾಗಿದೆ. ರಾಜ್ಯದಲ್ಲಿ ರೆಮಿಡಿಸಿವರ್ ಲಭ್ಯತೆ ಇದೆ. ಆದರೆ ಖಾಸಗಿ ಆಸ್ಪತ್ರೆಯವರು ಇಲ್ಲ ಅಂತ ಹೇಳಿದ್ದಾರೆ. ಎಷ್ಟು ಬೇಕಿದೆ ಅಂತ ಖಾಸಗಿ ಆಸ್ಪತ್ರೆಯಿಂದ ಲೆಕ್ಕ ಪಡೆಯಲಾಗುವುದು. ಸರ್ಕಾರದಿಂದ ನಾವು ಪಡೆದ ದರದಲ್ಲೇ, ಅವರಿಗೆ ಪೂರೈಸುತ್ತೇವೆ ಎಂದರು.
ನಮಗೆ ಸುತಾರಾಂ ಲಾಕ್‌ಡೌನ್ ಇಷ್ಟ ಇಲ್ಲ: ಜನರು ಅನಗತ್ಯವಾಗಿ ಸೇರೋದು ಬಿಡಬೇಕು. ನಾವೇ ನಿಬಂಧನೆ ಹಾಕಿಕೊಂಡರೆ ಲಾಕ್‌ಡೌನ್ ಮಾಡೋ ಅವಶ್ಯಕತೆ ಇಲ್ಲ. ಸರ್ಕಾರಿಂದ ಏನೆಲ್ಲ ಮಾಡಬೇಕೋ ಅದನ್ನೆಲ್ಲಾ ಪೂರ್ವಯೋಜಿತವಾಗಿ ಮಾಡುತ್ತಿದ್ದೇವೆ. ತಜ್ಞರು ಇಂದು ವರದಿ ಕೊಡುತ್ತಾರೆ. ವರದಿ ಬಂದ ಮೇಲೆ ಸಿಎಂ ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ನಾನಾಗಲೀ ಸಿಎಂ ಆಗಲೀ ಲಾಕ್‌ಡೌನ್ ಮಾಡುತ್ತೇವೆ ಅಂತ ಹೇಳಿಲ್ಲ. ಜನರು ನಮ್ಮ ಜತೆ ಸಹಕಾರ ಕೊಡದೇ ಇದ್ದರೆ ನಮ್ಮ ಕೈಮೀರಿದರೆ ನಾವು ಅಸಹಾಯಕರಾಗುತ್ತೇವೆ. ನಮಗೆ ಸುತಾರಾಮ್ ಲಾಕ್ ಡೌನ್ ಇಷ್ಟ ಇಲ್ಲ. ಲಾಕ್ ಡೌನ್‌ನಿಂದ ಎಷ್ಟು ಆರ್ಥಿಕ ಕಷ್ಟ ಇದೆ ಅನ್ನೋದು ಗೊತ್ತಿದೆ. ದಯವಿಟ್ಟು ಸಹಕರಿಸಿ ಅಂತ ಮನವಿ ಮಾಡಿದರು.
ಇದನ್ನೂ ಓದಿ: ಕೊರೊನಾ ಮರೆತು ಸೆಲ್ಫಿಗಾಗಿ ಸಿದ್ದರಾಮಯ್ಯಗೆ ಮುಗಿಬಿದ್ದ ಅಭಿಮಾನಿಗಳು..!
ಹಳ್ಳಿಗೆ ಕೊರೊನಾ ಕೊಂಡೊಯ್ಯಬೇಡಿ:ಯುಗಾದಿ ಎಲ್ಲರಿಗೂ ದೊಡ್ಡ ಹಬ್ಬ. ಕೋವಿಡ್ ಬಂದಿದ್ದು, ಲಸಿಕೆ ಎಲ್ಲರೂ ಪಡೆಯಿರಿ. ಬೇವು ಕೋವಿಡ್, ಬೆಲ್ಲ ಲಸಿಕೆ. ಎಲ್ಲರೂ ಲಸಿಕೆ ಪಡೆಯಿರಿ. ಹಳ್ಳಿಗೆ ಹೋಗೋದು ಕಡಿಮೆ ಮಾಡಿ. ಅವರು ಸುರಕ್ಷಿತವಾಗಿ ಇರಲಿ, ಇಲ್ಲಿಂದ ರೋಗ ತೆಗೆದುಕೊಂಡು ಹೋಗೋದು ಬೇಡ. ಹಳ್ಳಿಯವರು ಎಚ್ಚರಿಕೆಯಿಂದ ಇದ್ದಾರೆ.ಪಟ್ಟಣದಿಂದ ಸೋಂಕನ್ನು ಹಳ್ಳಿಗೆ ಕಳಿಸುವುದು ಬೇಡ, ಇದ್ದಲ್ಲೇ ಯುಗಾದಿ ಆಚರಿಸಿ ಎಂದು ಕೋರಿದರು.