ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿಗಳಿಗೆ ಸಂವಿಧಾನದತ್ತ ಪರಮಾಧಿಕಾರವಾಗಿದೆ. ಆದ್ರೆ ನಮ್ಮದು ರಾಷ್ಟ್ರೀಯ ಪಕ್ಷವಾಗಿರುವ ಕಾರಣ ವರಿಷ್ಠರ ಜತೆ ಚರ್ಚಿಸಿದ ನಂತರವೇ ಎಲ್ಲ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಂಪುಟ ವಿಸ್ತರಣೆ ವಿಷಯದಲ್ಲೂ ವರಿಷ್ಠರೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಸಂಪುಟ ವಿಸ್ತರಣೆ ಕುರಿತು ಸಚಿವ ಆರ್.ಅಶೋಕ್ ಹೇಳಿಕೆ ಗೋವಿಂದರಾಜ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಕುರಿತು ಇಲ್ಲಿ ಯಾವುದೇ ಚರ್ಚೆಯಿಲ್ಲ, ಅದನ್ನು ಕೇಂದ್ರದ ವಿವೇಚನೆಗೆ ಬಿಟ್ಟಿದ್ದೇವೆ. ಕೇಂದ್ರ ಸೂಚನೆ ನೀಡುವ ರೀತಿ ಸಂಪುಟ ವಿಸ್ತರಣೆ ವಿಚಾರದಲ್ಲಿ ಮುಂದುವರೆಯಲಾಗುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ. ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ ನಂತರ ಕೇಂದ್ರದ ನಾಯಕರು ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಅಂತಿಮವಾಗಿ ವರಿಷ್ಠರೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಇಂದು ಸಂಪುಟ ವಿಸ್ತರಣೆ ಚರ್ಚೆ ಇಲ್ಲ: ಇಂದು ಸಂಪುಟ ವಿಸ್ತರಣೆ ಸಂಬಂಧ ಯಾವುದೇ ಚರ್ಚೆ ನಡೆಯುವುದಿಲ್ಲ. ರಾಜ್ಯ ಉಸ್ತುವಾರಿಗಳು ನನ್ನೂ ಸೇರಿದಂತೆ ಕೆಲ ಮುಖಂಡರನ್ನು ಕರೆಸಿಕೊಂಡು ಮಾತುಕತೆ ನಡೆಸಲಿದ್ದಾರೆ. ಆದರೆ ಅದು ಸಂಪುಟ ವಿಸ್ತರಣೆಗೆ ಸಂಬಂಧಪಟ್ಟಿದ್ದಲ್ಲ, ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಚರ್ಚೆಗಳು ನಡೆಯುತ್ತಿವೆಯೇ ಹೊರತು ಬೇರೆ ದೃಷ್ಟಿಯಿಂದ ಚರ್ಚೆ ಅಲ್ಲ. ನಾವು ಹೋಗುತ್ತಿರುವುದು ಮಂತ್ರಿಮಂಡಲದ ಚರ್ಚೆಗೆ ಅಲ್ಲವೆಂದು ಸಚಿವ ಅಶೋಕ್ ಸ್ಪಷ್ಟಪಡಿಸಿದರು.
ಅಧಿವೇಶನದ ನಂತರ ಸಂಪುಟ ವಿಸ್ತರಣೆ ಆಗುತ್ತೋ, ಈಗಲೇ ಆಗುತ್ತದೆಯೋ ಏನೋ ಗೊತ್ತಿಲ್ಲ. ಯಡಿಯೂರಪ್ಪನವರು ಮತ್ತು ವರಿಷ್ಠರ ನಿರ್ಧಾರವೇ ಅಂತಿಮವಾಗಲಿದೆ. ಯಾವಾಗ ವಿಸ್ತರಣೆ ಮಾಡಬೇಕು, ಯಾವ ಸಂದರ್ಭ ಒಳ್ಳೆಯದು ಎನ್ನುವುದನ್ನು ಸಿಎಂ ಮತ್ತು ಕೇಂದ್ರದ ನಾಯಕರು ಮಾಡಲಿದ್ದು, ಅದರಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.
ಓದಿ:ಸಚಿವ ಸಂಪುಟ ವಿಸ್ತರಣೆ ಬಗ್ಗೆ ತರಾತುರಿ ಯಾಕೆ?: ಅರುಣ್ ಸಿಂಗ್ ಪ್ರಶ್ನೆ
ಬಿಜೆಪಿಯಲ್ಲಿ ಒಡಕಿಲ್ಲ: ಬಿಬಿಎಂಪಿ ಚುನಾವಣೆ ಸಂಬಂಧ ನಡೆದ ಸಭೆಯಲ್ಲಿ ಯಾವುದೇ ಒಡಕು ಸೃಷ್ಟಿಯಾಗಿಲ್ಲ, ಕೋರ್ ಕಮಿಟಿ ಸದಸ್ಯರಾದ ಕಾರಣ ನಾನು ಬೆಳಗಾವಿಯಲ್ಲಿದ್ದೆ, ಹಾಗಾಗಿ ನಾನು ಭಾಗಿಯಾಗಿರಲಿಲ್ಲ. ಚುನಾವಣೆ ಮಾಡುವ ದೃಷ್ಟಿಯಿಂದ ಈಗಾಗಲೇ ಹಲವಾರು ಸಭೆಗಳನ್ನು ಮಾಡಲಾಗಿದೆ. ಹಾಗಾಗಿ ಯಾವ ರೀತಿಯ ಗೊಂದಲಗಳು ಇಲ್ಲ, ಕಾರಣಾಂತರಗಳಿಂದ ಸಚಿವ ಸೋಮಣ್ಣ ಸಭೆಗೆ ಹೋಗಿರಲಿಲ್ಲ. ಬಿಜೆಪಿ ಬಿಬಿಎಂಪಿಯಲ್ಲಿ ಗೆಲ್ಲಬೇಕು ಎನ್ನುವುದಷ್ಟೇ ನಮ್ಮ ಮುಂದಿರುವ ವಿಷಯ. ನಮ್ಮಲ್ಲಿ ಯಾವುದೇ ಒಡಕಿಲ್ಲ ಎಂದರು.
ಕಾಂಗ್ರೆಸ್ ಕಥೆ ಗೋವಿಂದ, ಗೋವಿಂದ, ಗೋವಿಂದಾ: ಕುಮಾರಸ್ವಾಮಿ ನಿನ್ನೆ ಮನದಾಳದ ಮಾತುಗಳನ್ನು ಆಡಿದ್ದಾರೆ, ಕಾಂಗ್ರೆಸ್ ಯಾವತ್ತಿದ್ದರೂ ಒಂದು ರೀತಿಯ ವಿಷ. ವಿಷವನ್ನ ಸ್ವಲ್ಪ ಕುಡಿದರು ನಿಧಾನವಾಗಿ ಏರುತ್ತೆ, ಜಾಸ್ತಿ ಕುಡಿದರೆ ಬೇಗ ಸಾಯುತ್ತಾರೆ. ಆ ರೀತಿ ಜೆಡಿಎಸ್ ಕಾಂಗ್ರೆಸ್ ನ ಸಹವಾಸ ಮಾಡಿ ಒಂದು ವರ್ಷಕ್ಕೇ ಮೈತ್ರಿ ಸರ್ಕಾರ ಪತನವಾಗಿದೆ. ಕಾಂಗ್ರೆಸ್ ನವರ ವಿಷ ಸ್ವಲ್ಪ ಜಾಸ್ತಿಯಾಗಿತ್ತು. ಅದಕ್ಕಾಗಿ ಬೇಗ ಸರ್ಕಾರ ಬಿದ್ದುಹೋಯಿತು. ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ ಆಪರೇಷನ್ ಕಮಲ ನಡೆದಿದ್ದಲ್ಲ, ಕಾಂಗ್ರೆಸ್ಸಿನ ಆಪರೇಷನ್ ನಡೆದಿದ್ದು. ಕಾಂಗ್ರೆಸ್ಸಿನ ಆಪರೇಷನ್, ಸರ್ಜಿಕಲ್ ಸ್ಟ್ರೈಕ್ ಗೆ ಬಲಿಪಶುವಾಗಿ ಕುಮಾರಸ್ವಾಮಿ ಸರ್ಕಾರ ಬಿದ್ದುಹೋಯಿತು. ಇದರಿಂದ ಬಿಜೆಪಿ ಸರ್ಕಾರವನ್ನು ಬೀಳಿಸಿಲ್ಲ ಎನ್ನುವ ಸ್ಪಷ್ಟತೆ ರಾಜ್ಯದ ಜನತೆಗೆ ಸಿಕ್ಕಿದೆ ಎಂದರು.
ಓದಿ:ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆಗೆ ಯತ್ನ: ಬಿಎಸ್ವೈ ವೇಗಕ್ಕೆ ಸ್ಪಂದಿಸದ ಹೈಕಮಾಂಡ್!
ಯಾವ ಪಕ್ಷ ಸರ್ಕಾರವನ್ನು ಬೀಳಿಸಿತು. ಯಾವ ಪಕ್ಷ ಕುಮಾರಸ್ವಾಮಿಗೆ ದ್ರೋಹ ಬಗೆಯಿತು. ಜೊತೆ ಜೊತೆಯಲ್ಲಿ ಇದ್ದು ಜೊತೆ ಜೊತೆಯಲ್ಲಿ ಮಾತನಾಡುತ್ತಲೇ ವಿಷದ ಇಂಜೆಕ್ಷನ್ನು ನೀಡಿದ್ದು ಕಾಂಗ್ರೆಸ್ ಪಕ್ಷ ಎಂದು ಈಗ ಅವರಿಗೆ ಜ್ಞಾನೋದಯವಾಗಿದೆ. ಹಿಂದೆ ಮೈತ್ರಿ ಸರ್ಕಾರ ಬಿಜೆಪಿ ಜೊತೆಯಲ್ಲಿ ಇದ್ದಾಗ ಕುಮಾರಸ್ವಾಮಿಗೆ ವರ್ಚಸ್ಸು ಸಿಕ್ಕಿತ್ತು ಪಾಪ್ಯುಲರ್ ಸಿಎಂ ಆಗಿದ್ದರು ನಾವೆಲ್ಲಾ ಅಂದು ಸಹಕಾರ ಕೊಟ್ಟಿದ್ದೆವು ಆದರೆ ಕಾಂಗ್ರೆಸ್ ದಿನನಿತ್ಯ ಕಿರುಕುಳ ನೀಡಿತ್ತು. ಮಾನಸಿಕ ಹಿಂಸೆ ಎಲ್ಲವನ್ನು ಕೊಟ್ಟು ವಿಷವನ್ನು ಹಾಕಿ ಸರ್ಕಾರವನ್ನೇ ಪತನಗೊಳಿಸಿತು. ಹಾಗಾಗಿ ಸರ್ಕಾರ ಬಿದ್ದಿದ್ದು ಕಾಂಗ್ರೆಸ್ ನಿಂದ ಎಂದು ಜಗಜ್ಜಾಹೀರಾಗಿದೆ ಯಾರು ಇನ್ನು ಮುಂದೆ ಕಾಂಗ್ರೆಸ್ನ್ನು ನಂಬಬೇಡಿ ಎಂದು ಪ್ರತಿ ಪಕ್ಷದವರು ಹೇಳುತ್ತಿದ್ದಾರೆ ಕಾಂಗ್ರೆಸ್ನ್ನು ನಂಬಬೇಡಿ. ಕಾಂಗ್ರೆಸ್ನ್ನು ನಂಬಿದರೆ ನಿಮಗೆ ವಿಷ ಹಾಕುತ್ತಾರೆ ಎಂದು ಪ್ರತಿ ಪಕ್ಷದವರು ಹೇಳಿದ್ದಾರೆ. ಹಾಗಾಗಿ ಕಾಂಗ್ರೆಸ್ಸಿನ ಕಥೆ ಗೋವಿಂದ ಗೋವಿಂದ ಗೋವಿಂದ ಎಂದು ವ್ಯಂಗ್ಯವಾಡಿದರು.