ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕೆಂಬ ಬೇಡಿಕೆಯನ್ನು ಕಾಂಗ್ರೆಸ್ ಇಟ್ಟಿರುವುದು ಹಾಸ್ಯಾಸ್ಪದ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸ್ಪಷ್ಟವಾದ ನಿಲುವು ತೆಗೆದುಕೊಂಡಿದ್ದಾರೆ. ನಮ್ಮ ಸರ್ಕಾರ ಇಲ್ಲದಿದ್ದರೆ ತನಿಖೆಯೇ ಆಗುತ್ತಿರಲಿಲ್ಲ. ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಬೆದರಿಕೆ ಹಾಕುವವರು ಸಮಾಜದಲ್ಲಿ ಇರುತ್ತಾರೆ. ಆದರೆ, ಬೆದರಿಕೆಗೆ ಬಗ್ಗದೆ ನಮ್ಮ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಬೇರೆಯವರು ಇದ್ದರೆ ಇದೆಲ್ಲವನ್ನು ಮುಚ್ಚಿ ಹಾಕುತ್ತಿದ್ದರು. ಸಿಎಂ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.
ಈ ಹಿಂದೆಯೂ ಹಲವು ಐಎಎಸ್, ಐಪಿಎಸ್ ಅಧಿಕಾರಿಗಳ ವಿರುದ್ಧ ಆರೋಪಗಳಿದ್ದವು. ಆದರೆ, ಯಾವುದೇ ತನಿಖೆ ಆಗಿರಲಿಲ್ಲ. ಎಲ್ಲವನ್ನು ಮುಚ್ಚಿ ಹಾಕಲಾಗುತ್ತಿತ್ತು. ನಮ್ಮ ಸಿಎಂ ತನಿಖಾಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಆ ಕಾರಣಕ್ಕಾಗಿಯೇ ದಾಳಿ, ಬಂಧನ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಸಚಿವ ಅಶೋಕ್ ಹೇಳಿದರು.
ರಕ್ಷಣೆ ಮಾಡುವ ಪ್ರಶ್ನೆ ಇಲ್ಲ: ಅಪರಾಧಿಗಳನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಸತ್ಯಾಸತ್ಯತೆ ಬಗ್ಗೆ ತನಿಖೆ ಆಗಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದು ಮುಂದು ನೋಡಲ್ಲ. ಟೀಕೆ, ಮೆಚ್ಚುಗೆ ಬರಲಿ, ಆದರೆ ನಮ್ಮ ಸರ್ಕಾರ ಯಾರನ್ನೂ ರಕ್ಷಣೆ ಮಾಡಲ್ಲ ಎಂದು ಹೇಳಿದರು.