ಬೆಂಗಳೂರು:ಮೀಸಲಾತಿ ಉಪ ಸಮಿತಿ ಜತೆಗೆ ಎರಡು ಬಾರಿ ಸಭೆಯಾಗಿದೆ. ಅದರ ಬಗ್ಗೆ ಬಹಿರಂಗವಾಗಿ ಮಾತನಾಡುವುದಕ್ಕೆ ಆಗಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಾಲ ಕಾಲಕ್ಕೆ ಮಾಹಿತಿ ತರಿಸಿಕೊಳ್ಳುತ್ತಿದ್ದೇವೆ. ಎಷ್ಟು ಸಭೆ ಆಗುತ್ತದೆ ಎನ್ನುವದೂ ಗೊತ್ತಾಗಲ್ಲ. ರಾಜ್ಯದ ವಿವಿಧ ಸಮುದಾಯಗಳಲ್ಲೂ ಮೀಸಲಾತಿ ಬೇಕು ಎಂಬ ಬೇಡಿಕೆ ಇದೆ. ಕೆಲವು ಸಮುದಾಯಗಳು ಹಳೆಯ ಮೀಸಲಾತಿ ಇರಲಿ ಅಂತಿದ್ದಾರೆ. ಮುಂದೆ ನೋಡೋಣ ಕಾಲ ಕಾಲಕ್ಕೆ ಏನು ಬದಲಾಗುತ್ತದೆ ಎಂದು ತಿಳಿಸಿದರು.
ಮೀಸಲಾತಿ ಹೋರಾಟ ಅಗತ್ಯವಿಲ್ಲ:ಮೀಸಲಾತಿ ಕುರಿತು ಹೋರಾಟ ಮಾಡುವ ಅಗತ್ಯ ಇಲ್ಲ. ಆರಂಭದಲ್ಲಿ ಇರುವಾಗಲೇ ಹೋರಾಟಕ್ಕೆ ಇಳಿದರೆ ಹೇಗೆ?. ಜನಸಂಖ್ಯೆ ಆಧಾರದ ಮೇಲೆ ಕೊಡಿ ಅಂತ ಕೇಳುವವರು ಇದ್ದಾರೆ ಎಂದರು. ನಮ್ಮ ಇಲಾಖೆ ಕೆಳಗೆ ಇನ್ನೊಂದು ಸಂಸ್ಥೆ ಇದೆ. ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಅದು. ಕಾನೂನು, ಮಕ್ಕಳಿಗೆ ಕಾನೂನು ಪರಿಚಯ, ಶಾಸನ ರಚನೆ ಕುರಿತು ಅರಿವು ಹೀಗೆ ಅನೇಕ ವಿಚಾರಗಳನ್ನು ಪರಿಚಯ ಮಾಡ್ತಾರೆ. ಇದೊಂದು ಮಹತ್ವದ ಸರ್ಕಾರದ ಅಂಗ ಸಂಸ್ಥೆಯಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ತನ್ನ ಕಾರ್ಯ ಚಟುವಟಿಕೆ ಗಳನ್ನು ಪರಿಚಯಿಸುವ ಹಾಗೂ ಉಪಯುಕ್ತ ಮಾಹಿತಿ ಹೊಂದಿರುವ, ದಿನದರ್ಶಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಸರ್ಕಾರದ ಯೋಜನೆ ಏನು?:ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಗಳ ಮೀಸಲಾತಿ ಬೇಡಿಕೆ ಪೂರೈಸಲು ರಾಜ್ಯ ಸರ್ಕಾರ ಹೊಸದಾಗಿ 2C ಹಾಗೂ 2D ಪ್ರವರ್ಗ ಸೃಷ್ಟಿಸಲು ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿತ್ತು. ಹಿಂದುಳಿದ ವರ್ಗಗಳ ಆಯೋಗದ ವರದಿ ಆಧರಿಸಿ ಸರ್ಕಾರ ಈ ತೀರ್ಮಾನ ಕೈಗೊಂಡಿತ್ತು. 3A ನಲ್ಲಿರುವ ಒಕ್ಕಲಿಗರಿಗೆ 2C ಪ್ರವರ್ಗ ಸೃಷ್ಟಿಸಲಾಗಿದ್ದರೆ, 3B ಯಲ್ಲಿದ್ದ ಪಂಚಮಸಾಲಿ ಸೇರಿ ಲಿಂಗಾಯತರಿಗೆ 2D ಕ್ಯಾಟಗರಿ ಸೃಷ್ಟಿಸಲು ಮಹತ್ವದ ನಿರ್ಧಾರ ತೆಗೆದುಕೊಂಡಿತು.