ಬೆಂಗಳೂರು:ಮೀಸಲು ವಿಧಾನಸಭೆ ಕ್ಷೇತ್ರ ಆನೇಕಲ್ನಲ್ಲಿ ಒಂದು ಭವ್ಯವಾದ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ದಶಕಗಳ ಕಾಲ ಪ್ರಗತಿಪರ ಹೋರಾಟಗಾರರು ಒತ್ತಾಯಿಸಿದ್ದರಿಂದ ಕಾಮಗಾರಿ ಆರಂಭಗೊಂಡಿತ್ತು. ಇದೀಗ ಗುತ್ತಿಗೆ ಪಡೆದವರಿಗೆ ಸರ್ಕಾರದ ವತಿಯಿಂದ ಬಿಲ್ ಮೊತ್ತ ಬಾರದ ಕಾರಣ ಪ್ರಗತಿಪರರು ಸುದ್ದಿಘೋಷ್ಠಿ ನಡೆಸಿದರು. ಹೀಗಾಗಿ ಉಪಮುಖ್ಯಮಂತ್ರಿ,ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಆನೇಕಲ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಬಿಲ್ ವಿಳಂಬ, ಅಧಿಕಾರಿ ವಜಾಕ್ಕೆ ಕ್ರಮ ಪತ್ರಕರ್ತರ ಪ್ರಶ್ನೆಗಳ ಮೇರೆಗೆ ಅಂಬೇಡ್ಕರ್ ಭವನ ಕಾಮಗಾರಿ ಸ್ಥಳಕ್ಕೆ ಆಗಮಿಸಿದ ಕಾರಜೋಳ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದನ್ನು ಕಂಡು ಪ್ರಗತಿಪರ ಹೋರಾಟಗಾರರಿಂದ ಮಾಹಿತಿ ಪಡೆದು,ಪರಿಶೀಲಿಸಿದರು.
ಮಾಜಿ ಸಚಿವ ಹಾಲಿ ಸಂಸದ ಎ.ನಾರಾಯಣಸ್ವಾಮಿ ಅಂಬೇಡ್ಕರ್ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರು. ಅನಂತರ ಈಗಿನ ಶಾಸಕ ಬಿ. ಶಿವಣ್ಣ ಮತ್ತಷ್ಟು ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಎಂದಿನಂತೆ ಕಾಮಗಾರಿ ಸುಸೂತ್ರವಾಗಿ ನಡೆದಿದ್ದು, ಸುಮಾರು 8 ಕೋಟಿಗೂ ಮಿಗಿಲಾಗಿ ಕಾಮಗಾರಿ ನಡೆದಿದೆ. ಈವರೆಗೂ ಒಂದು ಸಣ್ಣ ಬಿಲ್ ಸಹ ಗುತ್ತಿಗೆದಾರನಿಗೆ ಸಿಗದೇ ಕಾಮಗಾರಿ ಮುಂದುವರೆಯುವ ಲಕ್ಷಣ ಕಾಣುತ್ತಿಲ್ಲವೆಂದು ಈ ವೇಳೆ ಸಮಿತಿಯವರು ದೂರಿದ್ದಾರೆ.
ಕಳೆದ ತಿಂಗಳಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಬಿಲ್ ಬಿಡುಗಡೆಗೊಳಿಸಿಲ್ಲ ಎನ್ನುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದೀಗ ಸಚಿವರು ಈ ಕುರಿತು ವಿಚಾರಿಸಲು ಭರವಸೆ ನೀಡಿದ್ದಾರೆ.