ಬೆಂಗಳೂರು:ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಗಪುರ ವಾರ್ಡ್ನಲ್ಲಿನ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಚಿವ ಗೋಪಾಲಯ್ಯ ಉಚಿತವಾಗಿ ಲ್ಯಾಪ್ಟಾಪ್ ವಿತರಿಸಿದ್ದಾರೆ.
ಸ್ಥಳೀಯ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರು ಅನುದಾನದಡಿ ಸುಮಾರು 200 ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ವಿತರಿಸಿ ಮಾತನಾಡಿದ ಸಚಿವ ಗೋಪಾಲಯ್ಯ, ಬಹುಶಃ ನೀವೆಲ್ಲ ಅದೃಷ್ಟವಂತರು ಎಂದರೆ ತಪ್ಪಾಗಲಾರದು. ಯಾಕಂದ್ರೆ ನಿಮಗೆ, ನಿಮ್ಮ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲೆಂದು ಲ್ಯಾಪ್ಟಾಪ್ ನೀಡುತ್ತಿದ್ದೇವೆ. ಎಲ್ಲರೂ ಚೆನ್ನಾಗಿ ಓದಿ ನಿಮ್ಮ ತಂದೆ-ತಾಯಿ ಹಾಗೂ ಊರಿಗೆ ಒಳ್ಳೆಯ ಹೆಸರು ತರಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ಕೋವಿಡ್-19 ನಿಯಂತ್ರಣಕ್ಕೆ ತರಲು ವಿದ್ಯಾವಂತರಾದ ನೀವೆಲ್ಲರೂ ಸಹಕರಿಸಬೇಕು. ನಿಮ್ಮ ಮನೆ, ಏರಿಯಾವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಏನಾದ್ರೂ ಸಹಾಯ ಬೇಕಿದ್ದರೆ ನನ್ನ ಕಚೇರಿಗೆ ಬನ್ನಿ, ನಿಮಗೆ 15 ದಿನಕ್ಕಾಗುವಷ್ಟು ಔಷಧಿಯನ್ನು ನೀಡುತ್ತೇನೆ. ಯಾರೂ ಧೃತಿಗೆಡದೆ ಜೀವನ ನಡೆಸಬೇಕು ಎಂದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ 3 ಸರ್ಕಾರಿ ಸ್ಮಾರ್ಟ್ ಶಾಲಾ ಕಟ್ಟಡಗಳನ್ನು ಉನ್ನತಿಗೊಳಿಸಿ ವಿಶ್ವದರ್ಜೆಯ ಶಿಕ್ಷಣ ನೀಡಲು ಎಲ್ಲ ರಿತಿಯ ಕೆಲಸ ಮಾಡುತ್ತಿದ್ದೇನೆ. 50 ಬೆಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನೂ ಸಮೀಪದ ಕಮಲಾನಗರದಲ್ಲಿ ನಿರ್ಮಿಸಲಾಗುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಆರೋಗ್ಯದ ದೃಷ್ಟಿಯಿಂದ ಈ ಆಸ್ಪತ್ರೆ ಕಟ್ಟಿಸಲಾಗುತ್ತದೆ ಎಂದು ತಿಳಿಸಿದರು.