ಬೆಂಗಳೂರು:ಕನಸು ಭಗ್ನಗೊಂಡ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭಗ್ನ ಪ್ರೇಮಿಯಂತೆ ವ್ಯಗ್ರರಾಗಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು "ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಹೆಚ್ಡಿಕೆ ಅವರ ನಿದ್ರೆ-ನೆಮ್ಮದಿ ಹಾರಿ ಹೋಗಿದೆ. ಹತಾಶೆಯ ಕೂಪದಲ್ಲಿ ಬಿದ್ದು ವಿಲ ವಿಲ ಒದ್ದಾಡುತ್ತಿರುವ ಅವರು ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದನ್ನೇ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿದ್ದಾರೆ. ಆರೋಪ ಮಾಡಿದರೆ ಅದನ್ನು ಸಾಬೀತುಪಡಿಸಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದ್ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಜೆಡಿಎಸ್ ಅಸ್ತಿತ್ವಕ್ಕಾಗಿ ಕುಮಾರಸ್ವಾಮಿ ಅವರಿಂದ ಇಲ್ಲಸಲ್ಲದ ಆರೋಪ: ಸಚಿವ ಪ್ರಿಯಾಂಕ್ ಖರ್ಗೆ
ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ: ಕುಮಾರಸ್ವಾಮಿ ಅವರು ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಲು ಒಮ್ಮೆ ಪೆನ್‌ಡ್ರೈವ್ ತೋರಿಸುತ್ತಾರೆ. ಮತ್ತೊಮ್ಮೆ ಸಿಡಿ ತೋರಿಸುತ್ತಾರೆ. ನಿಜವಾಗಿಯೂ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ನಾವ್ಯಾರು ಕುಮಾರಸ್ವಾಮಿಯವರ ಕೈಯನ್ನು ಕಟ್ಟಿ ಹಾಕಿಲ್ಲ ಎಂದು ಸವಾಲು ಹಾಕಿದ್ದಾರೆ.
'ಕಿಂಗ್ ಮೇಕರ್' ಕನಸನ್ನು ನುಚ್ಚುನೂರು:ಅವರು ಪದೇ ಪದೇ ತೋಳ ಬಂತು ತೋಳದ ಕಥೆಯ ಕಥಾನಾಯಕನ ರೀತಿ ವರ್ತಿಸಿದರೆ ಹೆದರುವರು ಯಾರು?. ಚುನಾವಣೆಗೂ ಮುನ್ನ 'ಕಿಂಗ್ ಮೇಕರ್' ಆಗುವ ಕನಸು ಕಂಡಿದ್ದರು. ಆದರೆ ಜನರು ಚುನಾವಣೆಯಲ್ಲಿ 'ಕಿಂಗ್ ಮೇಕರ್' ಕನಸನ್ನು ನುಚ್ಚುನೂರು ಮಾಡಿದರು ಎಂದು ವ್ಯಂಗ್ಯವಾಡಿದ್ದಾರೆ.
ಕನಸು ಭಗ್ನಗೊಂಡ ಹೆಚ್ಡಿಕೆ ಭಗ್ನ ಪ್ರೇಮಿಯಂತೆ ವ್ಯಗ್ರರಾಗಿದ್ದಾರೆ. ಹಾಗಾಗಿ ಬಾಯಿಗೆ ಬಂದಂತೆ ನಮ್ಮ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಾ ತಿರುಗಾಡುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಹೆಚ್ಡಿಕೆ ಕಿಡಿ:ನಾನು ಹಿಟ್ ಅಂಡ್ ರನ್ ವ್ಯಕ್ತಿಯಲ್ಲ, ಯಾವತ್ತೂ ಕೂಡ ನಾನು ಆ ರೀತಿ ಮಾಡಿದವನಲ್ಲ. ಕಾಂಗ್ರೆಸ್ನವರು ನನ್ನ ಹೆಸರೇಳಿ ಹಿಟ್ ಅಂಡ್ ರನ್ ಅಂತಾರೆ. ಹಲವು ಆರೋಪಗಳನ್ನು ಮಾಡಿದ್ದಾರೆ. ಈ ಹಿಂದೆ ಪೇಸಿಎಂ ಅಂತಾ ಪೋಸ್ಟರ್ ಬೇರೆ ಅಂಟಿಸಿದ್ದರು. ಎಲ್ಲದಕ್ಕೂ ದಾಖಲೆ ಕೊಡುತ್ತೇವೆ ಅಂತಾ ಹೇಳುತ್ತಿದ್ದರು. ಆದರೆ ಅವರೀಗ ಮಾಡ್ತಿರೋದು ಏನು?. ಅವರ ಯಾವುದೇ ಆರೋಪಗಳಿಗೆ ದಾಖಲೆಗಳಿವೆಯಾ? ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದರು.
ನಿನ್ನೆ(ಶನಿವಾರ) ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಹೆಚ್ ಡಿ ಕುಮಾರಸ್ವಾಮಿ ಅವರು, ಪರಮೇಶ್ವರ್ ಬಗ್ಗೆ ನನಗೆ ಗೌರವವಿತ್ತು. ಅವರ ಜೊತೆ ನಾನು ಕೆಲಸ ಮಾಡಿದ್ದೆ. ಬಿಡಿಎ ವಿಚಾರದಲ್ಲಿ ನಾನು ಕೈಹಾಕಿರಲಿಲ್ಲ. ಪೊಲೀಸ್ ವಿಚಾರ ಡಿಜಿಗೆ ಬಿಟ್ಟಿದ್ದೆ. ಹಿಂದೆ ನಾವು ಇಂಟರ್ ಫಿಯರ್ ಆಗಿರಲಿಲ್ಲ. ಇದೀಗ ಹಿಟ್ ಆ್ಯಂಡ್ ರನ್ ಅಂತ ಹೇಳ್ತೀರ ಎಂದು ಪರಮೇಶ್ವರ್ ವಿರುದ್ಧವೂ ಹೆಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:'ನಾನು ಹಿಟ್ ಅಂಡ್ ರನ್ ವ್ಯಕ್ತಿಯಲ್ಲ', ದೆಹಲಿಯಲ್ಲೇ ದಾಖಲೆ ಬಿಡುಗಡೆ ಮಾಡ್ತೇನಿ: ಮಾಜಿ ಸಿಎಂ ಹೆಚ್ಡಿಕೆ