ಬೆಂಗಳೂರು: ಕೇರಳ ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿದ್ದ ಗೋಮಾಂಸ ಖಾದ್ಯದ ಫೋಟೋವನ್ನು, ಸಚಿವ ಸಿ.ಟಿ ರವಿ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಪ್ರವಾಸಿಗರನ್ನು ರಾಜ್ಯಕ್ಕೆ ಆಹ್ವಾನ ಮಾಡಿದ್ದಾರೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಸಚಿವರ ಟ್ವೀಟ್ಗೆ ಕಮೆಂಟ್ಗಳ ಸುರಿಮಳೆಯೇ ಆಗಿದೆ.
ನೀವು ಸ್ವಾಗತಿಸುತ್ತಿರುವುದು ಗೋ ಭಕ್ಷಣೆಯನ್ನೋ ಅಥವಾ ಕೇರಳ ಪ್ರವಾಸೋದ್ಯಮವನ್ನೋ ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮ ಹಿಂದೂ ಧರ್ಮ ಗೋ ಮಾತೆ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಿ ಈ ರೀತಿ ಟ್ವೀಟ್ ಮಾಡಿದಿರಲ್ಲ ಸ್ವಾಮಿ. ಅಮಾಯಕರನ್ನು ಧರ್ಮದ ಖೆಡ್ಡಾದಲ್ಲಿ ಬೀಳಿಸಿ ನೀವು ಈತರಹ ಮಾಡೊದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಅವ್ರೇನೋ ಸೆಕ್ಯೂಲರ್ ಹೆಸರಲ್ಲಿ, ಸಂಸ್ಕೃತಿಯನ್ನೆಲ್ಲಾ ಬಿಟ್ಹಾಕಿ ಮಾಡಬಾರದ್ದನ್ನೆಲ್ಲಾ ಮಾಡ್ತಿದ್ದಾರೆ. ನೀವು ಅದನ್ನ ವೆಲ್ಕಮ್ ಅಂತೀದಿರಾ. ಇದನ್ನ ಬಿಜೆಪಿ ನಾಯಕರಿಂದ ನಿರೀಕ್ಷಿಸಿರಲಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತು ಅನ್ನೋ ಗಾದೆ ನಿಮಗೆ ಸರಿಯಾಗಿ ಅನ್ವಯಿಸುತ್ತೆ, ನೀವು ಯಾವುದನ್ನು ಸ್ವಾಗತಿಸುತ್ತಿದ್ದೀರಿ ಗೋಮಾಂಸ ಭಕ್ಷನೆಯನ್ನೋ ಕೇರಳ ಪ್ರವಾಸೋದ್ಯಮವನ್ನೋ ಎಂದು ಪ್ರಶ್ನೆ ಮಾಡಿದ್ದಾರೆ.
ಇಷ್ಟೆಲ್ಲಾ ಕಮೆಂಟ್ಗಳಿಗೆ ಸ್ವತಃ ಸಚಿವ ಸಿ.ಟಿ ರವಿಯವರೇ ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೇ ಮತ್ತೊಂದು ಟ್ವೀಟ್ ಮಾಡಿ, ತುಳುನಾಡಿನ ಸ್ವಾದವನ್ನು ಆಹ್ಲಾದಿಸಿ, ಪತ್ರೊಡೆ, ಕೊಟ್ಟೆ ಕಡುಬು, ಹಲಸಿನ ಹಣ್ಣಿನ ಗಟ್ಟಿ, ಅವಲಕ್ಕಿ ಉಪ್ಕರಿ, ಬದನೆಕಾಯಿ ಮೊಸರು ಗೊಜ್ಜು ಸೇರಿದಂತೆ ಹಲವು ಸಸ್ಯಹಾರಿ ಖಾದ್ಯಗಳ ಫೋಟೋ ಪ್ರಕಟಿಸಿ, ರಾಜ್ಯಕ್ಕೆ ಆಗಮಿಸುವಂತೆ ಪ್ರವಾಸಿಗರನ್ನು ಆಹ್ವಾನಿಸಿ ಟ್ವೀಟ್ ಮಾಡಿದ್ದಾರೆ.