ಕರ್ನಾಟಕ

karnataka

ETV Bharat / state

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ: ಸಚಿವ ಚಲುವರಾಯಸ್ವಾಮಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ದಿಸುವುದಿಲ್ಲ ಎಂದು ಕೃಷಿ ​ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಸಚಿವ ಚೆಲುವರಾಯಸ್ವಾಮಿ
ಸಚಿವ ಚೆಲುವರಾಯಸ್ವಾಮಿ

By ETV Bharat Karnataka Team

Published : Jan 2, 2024, 5:08 PM IST

Updated : Jan 2, 2024, 5:26 PM IST

ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ

ಬೆಂಗಳೂರು :ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಮ್ಮ ಕುಟುಂಬದ ಯಾರೂ ನಿಲ್ಲಲ್ಲ. ಅಭ್ಯರ್ಥಿ ಅಂತಿಮಗೊಂಡಿದ್ದು, ಸೂಕ್ತ ಸಮಯದಲ್ಲಿ ಹೆಸರು ಪ್ರಕಟಿಸಲಾಗುತ್ತದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯದಿಂದ ಸ್ಪರ್ಧೆ ಮಾಡುವ ಪ್ರಪೋಸಲ್​ ಅನ್ನು ಹೈಕಮಾಂಡ್ ರಾಜ್ಯ ಘಟಕ್ಕೆ ಕೊಟ್ಟಿಲ್ಲ. ಸಿಎಂ, ಡಿಸಿಎಂ ಕೂಡ ಈ ಬಗ್ಗೆ ಚಿಂತಿಸಿಲ್ಲ. ನಾವೆಲ್ಲಾ ಸೇರಿ ಸೂಕ್ತ ಅಭ್ಯರ್ಥಿಯನ್ನು ಈಗಾಗಲೇ ಆಯ್ಕೆ ಮಾಡಿದ್ದೇವೆ. ಸೂಕ್ತ ಸಮಯದಲ್ಲಿ ಹೆಸರು ಪ್ರಕಟಿಸುತ್ತೇವೆ. ನಾನಾಗಲಿ ಅಥವಾ ನಮ್ಮ ಕುಟುಂಬದಿಂದ ಮತ್ಯಾರಾದರೂ ಆಗಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ. ಸುಮಲತಾ ನಮ್ಮ ಜೊತೆ ಇಲ್ಲ. ಅವರು ಕಾಂಗ್ರೆಸ್​ಗೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದರು.

ಆಡಳಿತ ಪಕ್ಷದಲ್ಲಿ ಅಸಮಧಾನ ಇದೆ, ಲೋಕಸಭಾ ಚುನಾವಣೆ ನಂತರ ಸರ್ಕಾರ ಪತನವಾಗಲಿದೆ ಎನ್ನುವುದು ಬಿಜೆಪಿಯ ಹತಾಶೆಯ ಹೇಳಿಕೆಯಾಗಿದೆ. ಬಿಜೆಪಿಯಲ್ಲಿಯೇ ಶಾಸಕರ ನಡುವೆ ಅಸಮಾಧಾನ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್​. ಅಶೋಕ್ ಆಯ್ಕೆಗೆ ಎಷ್ಟು ಜನ ಅಸಮಾಧಾನ ಹೊಂದಿದ್ದಾರೆ ಅನ್ನೋದು ಬಹಿರಂಗವಾಗುತ್ತಿದೆ. ಅದರಲ್ಲಿ ಎಷ್ಟು ಜನ ಪಕ್ಷ ಬಿಡಲಿದ್ದಾರೋ ಇಲ್ಲವೋ ಗೊತ್ತಿಲ್ಲ. ಜೆಡಿಎಸ್ ನಲ್ಲಿಯೂ ಮೈತ್ರಿ ನಂತರ ಅಸಮಾಧಾನ ಹೊರಬಂದಿದೆ. ಅದನ್ನೆಲ್ಲಾ ಮುಚ್ಚಿಹಾಕಲು ನಾವೇ ಸರ್ಕಾರ ಮಾಡುತ್ತೇವೆ ಎನ್ನುವ ಹೇಳಿಕೆ ನೀಡುತ್ತಿದ್ದಾರೆ.

ಬಿಜೆಪಿಯವರು 105 ಇದ್ದವರು 17 ಸೇರಿಸಿಕೊಂಡು ಹೇಗೆ ಸರ್ಕಾರ ಮಾಡಿದರು ಅಂತಾ ಗೊತ್ತಿಲ್ಲವಾ? ಹಾಗಿದ್ದಾಗ ಈಗ ಅವರು ಹೇಗೆ ಸರ್ಕಾರ ಮಾಡಲು ಸಾಧ್ಯ? ಇಷ್ಟೊಂದು ದೊಡ್ಡ ಸಂಖ್ಯೆಯ ಸರ್ಕಾರ ಬೀಳಿಸಿ ಇಷ್ಟು ಅಲ್ಪ ಮತದ ಪಕ್ಷ ಅಧಿಕಾರಕ್ಕೆ ಬಂದ ಉದಾಹರಣೆಯೇ ಇಲ್ಲ. ನಮಗೆ 10 ಜನ ಶಾಸಕರು ಬರುತ್ತಾರೆಯೋ ಹೊರತು ಇಲ್ಲಿಂದ ಯಾರೂ ಹೋಗಲ್ಲ. ಯಾವ ಆಪರೇಷನ್ ಕಮಲ ನಡೆಯಲ್ಲ. 5 ವರ್ಷ ನಮ್ಮ ಸರ್ಕಾರ ಇರಲಿದೆ. ಒಬ್ಬನೇ ಒಬ್ಬ ಶಾಸಕ ಬಿಜೆಪಿ ಜೆಡಿಎಸ್ ಕಡೆ ನೋಡಲ್ಲ. ಚುನಾವಣೆ ಆಸುಪಾಸಿನಲ್ಲಿ 10-15 ಶಾಸಕರು ಕಾಂಗ್ರೆಸ್​ಗೆ ಬರಲಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧೆ ಮಾಡುವುದು ಬಿಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ, ಬಿಜೆಪಿ ಮತ್ತು ಜೆಡಿಎಸ್​ನ ಮೈತ್ರಿಕೂಟದ ಅಭ್ಯರ್ಥಿಗಳ ವಿಚಾರ ನನಗೆ ಬೇಡ. ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ತಂತ್ರ ರೂಪಿಸುತ್ತೇವೆ. ಎದುರುಗಡೆ ಅಭ್ಯರ್ಥಿ ಸೋಲಿಸಲು ಹೋರಾಡಲ್ಲ, ನಮ್ಮ ಅಭ್ಯರ್ಥಿ ಗೆಲ್ಲಿಸಲು ಹೋರಾಡಲಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬರ ಪರಿಹಾರದ ವಿಚಾರದಲ್ಲಿ ರಾಜ್ಯದ ಮನವಿ ಕುರಿತು ಕೇಂದ್ರ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನಮ್ಮ ಕಂದಾಯ ಇಲಾಖೆಯರು ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ, ನಾವೂ ಸಂಪರ್ಕಕ್ಕೆ ಯತ್ನಿಸುತ್ತೇವೆ. ಈ ಸಂಬಂಧ ಎಲ್ಲ ವಿದ್ಯಮಾನಗಳ ಕುರಿತು ಸಿಎಂ ಜೊತೆ ಮಾತನಾಡಲಿದ್ದೇವೆ. ಬರ ಪರಿಹಾರ ಬಿಡುಗಡೆ ಮಾಡುವಂತೆ ದೇಶದಲ್ಲೇ ಮೊದಲ ಅರ್ಜಿ ನಾವೇ ಕೊಟ್ಟಿದ್ದೇವೆ. ಬರ ಪರಿಹಾರಕ್ಕೆ ನೆರವು ಕೋರಿದ್ದೇವೆ. ಸಂಪುಟ ಉಪ ಸಮಿತಿ ವರದಿ ಕಳಿಸಿದ್ದೇವೆ. ಆದರೆ ಕೇಂದ್ರದ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯದ ಅರ್ಜಿ ಬಾಕಿ ಇದೆ. ಅದು ಯಾವಾಗ ಇತ್ಯರ್ಥವಾಗಲಿದೆ ಎಂದು ನೋಡಬೇಕು ಎಂದು ಹೇಳಿದರು.

ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ಶ್ರೀರಾಮನ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿಲ್ಲ. ಇದನ್ನು ರಾಜಕಾರಣ ಎನ್ನದೇ ಇರಲು ಹೇಗೆ ಸಾಧ್ಯ? ರಾಜಕಾರಣ ಮಾಡಲೆಂದೇ ಪ್ರತಿ ಚುನಾವಣೆಯಲ್ಲಿ ಒಂದೊಂದು ವಿಷಯ ತರಲಿದ್ದಾರೆ. ಶ್ರೀರಾಮ ಎಲ್ಲರ ರಾಮ, ಬಿಜೆಪಿಯವರ ರಾಮ ಮಾತ್ರವಲ್ಲ. ಅವರು ರಾಜಕೀಯ ಮಾಡುತ್ತಾರೆ. ಆದರೆ ದೇವರನ್ನು ಮುಂದಿಟ್ಟುಕೊಂಡು ನಾವು ರಾಜಕಾರಣ ಮಾಡಲ್ಲ. ಬಿಜೆಪಿಯವರಿಗೆ ಯಾವುದೇ ಜನಪರ ಕಾಳಜಿಯ ಯೋಜನೆ ಇಲ್ಲ, ಅಭಿವೃದ್ಧಿ ಮಾಡಿದ ಕೆಲಸ ಇಲ್ಲ. ಅದಕ್ಕಾಗಿ ಅವರು ರಾಮನನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಆರೋಪಿಸಿದರು.

ಕರ ಸೇವಕರ ಬಂಧನದ ವಿಚಾರದಲ್ಲಿ ನಮ್ಮ ಹಿತಾಸಕ್ತಿ ಇಲ್ಲ. ರಾಜ್ಯದಲ್ಲಿ ನಮ್ಮ ಸರ್ಕಾರ ರಚನೆಯಾದ ನಂತರ ಹಳೆ ಕೇಸ್ ಇತ್ಯರ್ಥ ಮಾಡುತ್ತಿದ್ದೇವೆಯೇ ಹೊರತು, ಹೊಸ ಕೇಸು ಹಾಕಿ ಎಂದು ಹೇಳಿಲ್ಲ. ಸುಮ್ಮನೆ ಅನಾವಶ್ಯಕವಾಗಿ ಚುನಾವಣೆ ಇದೆ ಎಂದು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ :ಕರ ಸೇವಕರ ಬಂಧನ: ದ್ವೇಷ ರಾಜಕಾರಣ ಮಾಡಲ್ಲ ಎಂದ ಸಿಎಂ ಸಿದ್ದರಾಮಯ್ಯ

Last Updated : Jan 2, 2024, 5:26 PM IST

ABOUT THE AUTHOR

...view details