ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯನವ್ರೇ ಟೀಕೆ ಕ್ರಿಯಾತ್ಮಕವಾಗಿರಲಿ, ಯಾರೂ ಯಾರಪ್ಪನ ಮನೆಯಿಂದ ಕೊಡಲ್ಲ.. ಬಿ ಸಿ ಪಾಟೀಲ್

ಕೇವಲ ಪ್ರಚಾರಕ್ಕಾಗಿಯೋ ಅಥವಾ ಕ್ರಿಯಾಶೀಲರಾಗಿದ್ದೇವೆ ಎಂದು ತೋರಿಸಿಕೊಳ್ಳಲೋ ಅಥವಾ ಸರ್ಕಾರವನ್ನು ಉದ್ದೇಶಪೂರಕವಾಗಿ ಟೀಕಿಸಲೇಬೇಕೆಂತಲೋ ಟೀಕಿಸಬಾರದು. ಮುಖ್ಯಮಂತ್ರಿಗಳ ವಿರುದ್ಧ ಕೀಳುಮಟ್ಟದ ಭಾಷೆ ಬಳಸುವುದನ್ನು ಬಿಡಬೇಕು..

Minister BC Patil outrage against Siddaramaiah
ಸಿದ್ದರಾಮಯ್ಯ ವಿರುದ್ಧ ಬಿ.ಸಿ.ಪಾಟೀಲ್ ವಾಗ್ದಾಳಿ

By

Published : Apr 3, 2021, 7:54 PM IST

ಬೆಂಗಳೂರು :ಯಾರೂ ಯಾರಪ್ಪನ ಮನೆಯಿಂದ ಕೊಡುವುದಿಲ್ಲ. ಎಲ್ಲರೂ ಸರ್ಕಾರದಿಂದಲೇ ಕೊಡುವುದು ಎಂಬುದು ಸಿದ್ದರಾಮಯ್ಯನವರ ಗಮನದಲ್ಲಿರಲಿ. ಸಿದ್ಧರಾಮಯ್ಯನವರೇ ನಿಮ್ಮ ಟೀಕೆಗಳು ಕ್ರಿಯಾತ್ಮಕವಾಗಿರಬೇಕೇ ಹೊರತು ಕೀಳುಮಟ್ಟದಲ್ಲಿ ಅಲ್ಲ.

ಕೀಳು ಮಟ್ಟದ ಭಾಷೆ ಬಳಸುವುದರಿಂದ ಜನಾನುರಾಗಿ ಆಗುತ್ತೇನೆ ಎಂದು ನೀವು ಭಾವಿಸಿದ್ದರೆ, ಅದು ತಪ್ಪು ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ನಿಮ್ಮ ಕಾಲದಲ್ಲಿ ಕೊಡುತ್ತಿದ್ದಂತೆಯೇ ಈಗಲೂ ಕೂಡ ಪಡಿತರ ವ್ಯವಸ್ಥೆ ಅದೇ ರೀತಿ ಮುಂದುವರೆದಿದೆ. ಆದರೆ, 2 ಕೆಜಿ ಅಕ್ಕಿ ಮಾತ್ರ ಕಡಿಮೆಯಾಗಿದೆ.

ಈ ಕೋವಿಡ್ ಮತ್ತು ನೆರೆ ಪ್ರವಾಹ ಪರಿಸ್ಥಿತಿಯಲ್ಲಿಯೂ ಕೂಡ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 10 ಸಾವಿರ ರೂ. ಕೊಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಕೋವಿಡ್ ಸಂಕಷ್ಟದ ಸಮಯದಲ್ಲಿ 10 ಲಕ್ಷ ರೈತರಿಗೆ ಪ್ರತಿಯೊಬ್ಬರಿಗೆ 5 ಸಾವಿರ ರೂ. ನಂತೆ ಮೆಕ್ಕೆಜೋಳಕ್ಕೆ ಪರಿಹಾರ ಕೊಟ್ಟಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಈ ರೀತಿ ಕೀಳು ಮಟ್ಟದ ಪ್ರಚಾರ ನಿಲ್ಲಿಸುವುದು ಒಳ್ಳೆಯದು ಎಂದಿದ್ದಾರೆ.

ಜನರಿಗೆ ಅಕ್ಕಿ ಕೊಡುತ್ತಿದ್ದೆವು ಎಂದು ಹೇಳುವ ಸಿದ್ದರಾಮಯ್ಯನವರು, ಈ ಅಕ್ಕಿಯನ್ನು ಯಾರೂ ಸಹ ಯಾರಪ್ಪನ ಮನೆಯಿಂದ ಕೊಡುವುದಿಲ್ಲ ಎಂಬುದನ್ನು ತಿಳಿಯಬೇಕು. ಕೀಳು ಮಟ್ಟದ ಮಾತು ಭಾಷಾ ಪ್ರಯೋಗದಿಂದ ಸರ್ಕಾರವನ್ನು ಟೀಕಿಸಿದ ಮಾತ್ರಕ್ಕೆ ಸಿದ್ದರಾಮಯ್ಯ ಜನಾನುರಾಗಿಗಳಾಗುತ್ತಾರೆ ಎಂದು ಒಂದು ವೇಳೆ ಭಾವಿಸಿದ್ದರೆ ಅದು ಅವರ ತಪ್ಪುಕಲ್ಪನೆ ಹಾಗೂ ಮೂರ್ಖತನವಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಓದಿ:ಸಿದ್ದರಾಮಯ್ಯಗೆ ಮಾತಿನ ಮೇಲೆ ಹಿಡಿತವಿರಲಿ, ಪರಿಸ್ಥಿತಿ ನೆಟ್ಟಗಿರುವುದಿಲ್ಲ: ಬೈರತಿ ಬಸವರಾಜ್ ಗುಟುರು

ಬಿಜೆಪಿ ಸರ್ಕಾರ ಬಿಪಿಎಲ್ ಕಾರ್ಡುದಾರ ಪ್ರತಿಯೊಬ್ಬರಿಗೆ 5 ಕೆಜಿ ಅಕ್ಕಿ, 1 ಕಾರ್ಡಿಗೆ 2 ಕೆಜಿ ಗೋಧಿ ನೀಡುತ್ತದೆ. ಅಂತ್ಯೋದಯ ಕಾರ್ಡಿಗೆ 35 ಕೆಜಿ ಅಕ್ಕಿಯನ್ನು ಈ ಮೊದಲಿನಂತೆಯೇ ನೀಡುತ್ತಿದೆ. ಕೇವಲ ಪ್ರಚಾರಕ್ಕಾಗಿಯೋ ಅಥವಾ ಕ್ರಿಯಾಶೀಲರಾಗಿದ್ದೇವೆ ಎಂದು ತೋರಿಸಿಕೊಳ್ಳಲೋ ಅಥವಾ ಸರ್ಕಾರವನ್ನು ಉದ್ದೇಶಪೂರಕವಾಗಿ ಟೀಕಿಸಲೇಬೇಕೆಂತಲೋ ಟೀಕಿಸಬಾರದು. ಮುಖ್ಯಮಂತ್ರಿಗಳ ವಿರುದ್ಧ ಕೀಳುಮಟ್ಟದ ಭಾಷೆ ಬಳಸುವುದನ್ನು ಬಿಡಬೇಕು ಎಂದು ಬಿ ಸಿ ಪಾಟೀಲ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

ABOUT THE AUTHOR

...view details