ಬೆಂಗಳೂರು:ನೈರುತ್ಯದಿಂದ ಈಶಾನ್ಯದ ಕಡೆ ಗಾಳಿ ಬೀಸುತ್ತಿದ್ದು, ಇನ್ನೂ 8 ದಿನ ಇದೇ ರೀತಿ ಇರಲಿದೆ. ಹಾಗಾಗಿ ರಾಜ್ಯಕ್ಕೆ ಮಿಡತೆಗಳು ಬರುವುದು ತೀರಾ ಕಡಿಮೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಿಡತೆಗಳು ರಾಜ್ಯಕ್ಕೆ ಪ್ರವೇಶಿಸುತ್ತವೆ ಎಂಬ ಆತಂಕ ಎದ್ದಿದೆ. ದಕ್ಷಿಣ ಆಫ್ರಿಕಾದಿಂದ ಬಲೂಚಿಸ್ತಾನ, ಪಾಕಿಸ್ತಾನದ ಮೂಲಕ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರಕ್ಕೆ ಬಂದ ವರದಿ ಇದ್ದು, ಮೇ 25 ರಂದು ಅಮರಾವತಿಯಿಂದ ವಿಡತೆಗಳು ಮೇ 28 ರಂದು ಬೋಂಡ್ಯಾಕ್ಕೆ ಬಂದಿವೆ. ಇವು ದಿನಕ್ಕೆ 150-200 ಕಿ.ಮೀಟರ್ ಗಾಳಿ ಜೊತೆ ಪ್ರಯಾಣಿಸಲಿವೆ ಎಂದು ಮಾಹಿತಿ ನೀಡಿದರು.
ಈ ವಿಡತೆಗಳು 1-2 ಗ್ರಾಂ ಬೆಳೆಗಳನ್ನು ತಿನ್ನಲಿದ್ದು, ದೊಡ್ಡ ಪ್ರಮಾಣದ ಬೆಳೆ ಹಾನಿ ಸಂಭವಿಸುತ್ತದೆ. ಇವು ಸಂಜೆಯ ಸಮಯದಲ್ಲಿ ಮಾತ್ರ ಆಹಾರ ತಿನ್ನಲಿದ್ದು, ಬಾಕಿ ಸಮಯ ಗಿಡದಲ್ಲೇ ಇರಲಿದೆ ಎಂದು ಮಾಹಿತಿ ನೀಡಿದರು.
- ಮಿಡತೆಗಳಿಗೆ ಔಷಧ ಸಿಂಪಡಣೆ ಅಗತ್ಯ:
ಕ್ಲೋರೋ ಪೈರಿಪಾಸ್ 1.2 ಲೀಟರ್, ಡೆಲ್ಟಮೆಥ್ರಿನ್ 450 ಎಂಎಲ್, ಫ್ರಿಪ್ರೋನಿಲ್ 225 ಎಂಎಲ್ ಔಷಧ ಸಿಂಪಡಣೆ ಮಾಡುವುದರಿಂದ ಮಿಡತೆಯಂತಹ ಕೀಟಗಳ ಸಾಯುತ್ತವೆ. ದ್ರೋಣ್ ಮೂಲಕ ಕೀಟನಾಶಕ ಸಿಂಪಡಿಸಬಹುದು ಅಥವಾ ಅಗ್ನಿಶಾಮಕವನ್ನು ಬಳಸಬಹುದಾಗಿದೆ ಎಂದರು.
ಕರ್ನಾಟಕದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಮಿಡತೆಗಳು ಗಾಳಿಗೆ ವಿರುದ್ಧವಾಗಿ ಬರಲು ಸಾಧ್ಯವಿಲ್ಲ. ನಾವು ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿದ್ದೇವೆ. ಔಷಧವನ್ನು ಗಡಿಯಲ್ಲಿ ದಾಸ್ತಾನು ಮಾಡಲಿದ್ದು ಸರ್ಕಾರದ ಹಣದಲ್ಲಿ ಔಷಧ ಸಿಂಪಡಣೆ ಮಾಡಲಾಗುವುದು. ರೈತರಿಂದ ಹಣ ಖರ್ಚು ಮಾಡಿಸುವುದಿಲ್ಲ. ನಮ್ಮಲ್ಲಿ ಅಗತ್ಯವಾಗಿರುವ 1ಲಕ್ಷ ಲೀಟರ್ ಕೀಟನಾಶಕ ಔಷಧ ದಾಸ್ತಾನು ಇದೆ ಎಂದು ತಿಳಿಸಿದರು.
ಬೀದರ್, ಯಾದಗಿರಿ, ಕೊಪ್ಪಳ ಭಾಗಕ್ಕೆ ದಾಳಿ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಹಣವನ್ನು ಬಿಡುಗಡೆ ಮಾಡಿದೆ. ಶೇ.25 ರಷ್ಟು ವಿಪತ್ತು ನಿಧಿಯಿಂದ ಹಣ ಬಳಕೆ ಮಾಡಬಹುದು. 200 ಕೋಟಿ ರೂ. ಹಣ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇ್ನನು ಜಿಲ್ಲಾ ಮಟ್ಟದ ಸಮಿತಿ, ಡಿಸಿ, ಸಿಇಒ, ಜಿಡಿ ಕೃಷಿ ಇಲಾಖೆ, ಅಗ್ನಿ ಶಾಮಕ ಒಳಗೊಂಡ ತಂಡ ರಚನೆ ಮಾಡಲಾಗಿದ್ದು, ತುರ್ತು ಸಂದರ್ಭ ಬಂದರೆ ಈ ತಂಡ ಕೆಲಸ ಮಾಡಲಿದೆ ಎಂದು ಹೇಳಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ಸುದ್ದಿಗೋಷ್ಠಿ ಕೋಲಾರದಲ್ಲಿ ಕಂಡು ಬಂದಿರುವ ಮಿಡೆತೆಗಳು ಬೇರೆ ಇವೆ. ಇವುಗಳಿಂದ ರೈತರು ಆತಂಕ ಪಡುವುದು ಬೇಡ ಎಂದು ಸಚಿವರು ಹೇಳಿದರು.