ಬೆಂಗಳೂರು: ಕಲಬುರಗಿ ಹೊರವಲಯ ಕಮಲಾಪುರ ಬಳಿ ಇಂದು ಭೀಕರ ಅಪಘಾತ ನಡೆದು ಬಸ್ನಲ್ಲಿದ್ದ 7 ಪ್ರಯಾಣಿಕರು ಸಜೀವ ದಹನರಾಗಿ, ಹಲವರು ಗಾಯಗೊಂಡಿರುವ ಘಟನೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ಸಿಎಂ ಟ್ವೀಟ್ ಮಾಡಿದ್ದಾರೆ.
ತನಿಖೆ ನಡೆಯುತ್ತಿದೆ: ಕಲಬುರಗಿ ಖಾಸಗಿ ಬಸ್ ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ವರದಿ ಬಂದ ಬಳಿಕ ಸಂಪೂರ್ಣ ವಿವರ ನೀಡುವುದಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾಸಗಿ ಬಸ್ ದುರಂತದಲ್ಲಿ ಏಳು ಜನರು ಮೃತಪಟ್ಟಿದ್ದಾರೆ. ಬಸ್ನಲ್ಲಿ ಸುಮಾರು 35 ಪ್ರಯಾಣಿಕರಿದ್ದರು. ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿದ್ದೇನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತನಿಖಾ ವರದಿ ಪೂರ್ಣಗೊಂಡ ಬಳಿಕ ಏನಾಗಿದೆಯೆಂದು ಹೇಳುತ್ತೇನೆ ಎಂದರು.
ಖಾಸಗಿ ಬಸ್ ಆಗಿರುವ ಕಾರಣ ಪರಿಹಾರಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಜೊತೆ ಮಾತಾಡುತ್ತೇನೆ. ಅಪಾಯ ಇರುವ ಕಡೆ ರಸ್ತೆ ಸುರಕ್ಷತಾ ಅನುದಾನವನ್ನು ಬಳಕೆ ಮಾಡಿ, ಅಪಘಾತಗಳನ್ನ ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ.