ಬೆಂಗಳೂರು :ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಉನ್ನತ ಶಿಕ್ಷಣ ಇಲಾಖೆಯಿಂದ ಶಿಕ್ಷಕರ ದಿನಾಚರಣೆ ಆಚರಿಸಲಾಯ್ತು. ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
'ನಾಗ್ಪುರ್ ಶಿಕ್ಷಣ ನೀತಿ' ಹೇಳಿಕೆಗೆ ವಿರೋಧ :ಬಳಿಕ ಮಾತಾನಾಡಿದ ಸಚಿವರು, ಡಿ ಕೆ ಶಿವಕುಮಾರ್ ಎನ್ಇಪಿಯನ್ನ 'ನಾಗ್ಪುರ್ ಶಿಕ್ಷಣ ನೀತಿ' ಎಂದು ಹೇಳಿಕೆ ಕೊಟ್ಟಿರುವುದು ಸರಿಯಲ್ಲ. ವಿರೋಧ ಮಾಡಬೇಕು ಅನ್ನೋ ಉದ್ದೇಶದಿಂದ ಈ ರೀತಿ ಮಾಡ್ತಿದ್ದಾರೆ. ನ್ಯೂನತೆ ಇದ್ದರೆ ಅದನ್ನ ತಿಳಿಸಿ ಹೇಳಲಿ ಎಂದ್ರು.
ಡಿ ಕೆ ಶಿವಕುಮಾರ್ ಹೇಳಿಕೆಗೆ ಸಚಿವ ಅಶ್ವತ್ಥ್ ನಾರಾಯಣ ತಿರುಗೇಟು ಡಿಕೆಶಿಯಿಂದ ಶಿಕ್ಷಕರಿಗೆ ಅವಮಾನ :ರಾಷ್ಟ್ರೀಯ ಶಿಕ್ಷಣ ನೀತಿ ಎನ್ನುವುದು ಸಮಸ್ಯೆನಾ? ಪರಿಹಾರನಾ? ಎನ್ಇಪಿ ಅಂದರೆ ನಾಗ್ಪುರ್ ಶಿಕ್ಷಣ ನೀತಿ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟ್ವಿಟರ್ ಅಭಿಯಾನ ನಡೆಸುತ್ತಿದ್ದಾರೆ.
ಇದಕ್ಕೆ ತಿರುಗೇಟು ನೀಡಿದ ಸಚಿವರು, ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕ್ರಿಯೆಯಲ್ಲಿ ತೊಡಗಿರುವವರೆಲ್ಲಾ ಶಿಕ್ಷಕರು ಹಾಗೂ ಪ್ರಾಧ್ಯಾಪಕರು. ಶಿಕ್ಷಕರ ದಿನಾಚರಣೆಯಂದು ಡಿ ಕೆ ಶಿವಕುಮಾರ್ ಅವರೆಲ್ಲರಿಗೂ ಅವಮಾನ ಮಾಡೋ ಕೆಲಸ ಮಾಡುತ್ತಿದ್ದಾರೆ ಅಂತಾ ಕಿಡಿಕಾರಿದರು.
ಇಡೀ ಪಾಲಿಸಿ ಪ್ರಕ್ರಿಯೆ ಅವಮಾನಿಸುವ ಕೆಲಸ ಮಾಡುತ್ತಿದ್ದು, ಡಿ ಕೆ ಶಿವಕುಮಾರ್ಗೆ ಏನು ಹೇಳ್ತಿದ್ದೀನಿ ಅನ್ನೋ ಅರಿವು ಇಲ್ಲದೇ ಹೇಳ್ತಿದ್ದಾರೆ. ಅದನ್ನ ಸರಿಪಡಿಸಿಕೊಳ್ಳಬೇಕು, ಇಲ್ಲವಾದರೆ ಅವ್ರಿಗೇ ತಿರುಗು ಬಾಣವಾಗುತ್ತೆ. ಎನ್ಇಪಿ ಬಗ್ಗೆ ಗೊತ್ತಿಲ್ಲ ಅಂದರೆ ಬೇರೆಯವರ ಹತ್ರ ಕೇಳಿ ಸರಿಯಾಗಿ ತಿಳಿದುಕೊಳ್ಳಿ, ಇಲ್ಲವಾದರೆ ನಾನೇ ಸದನದಲ್ಲಿ ಬಂದು ಮಾತಾಡ್ತೀನಿ ಅಂತಾ ಅಂದರು.
ಹಿಂದಿ ಹೇರಿದರವರು ಕಾಂಗ್ರೆಸಿಗರು, ನಾವಲ್ಲ :ಹಳೇ ನೀತಿಯಲ್ಲಿ ಹಿಂದಿ ಹೇರಿಕೆ ಇತ್ತು. ಆದರೆ, ಈ ಹೊಸ ನೀತಿಯಲ್ಲಿ ಎರಡು ದೇಶಭಾಷೆ, ಅಂತಾರಾಷ್ಟ್ರೀಯ ಭಾಷೆ ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ಮೊದಲಿಗಿಂತಲೂ ಭಾಷೆ ನೀತಿಯಲ್ಲಿ ಬಹಳ ದೊಡ್ಡ ಸುಧಾರಣೆಯನ್ನ ಹೊಸ ನೀತಿಯಲ್ಲಿ ಕಾಣಬಹುದು ಎಂದ್ರು. ಈ ದೇಶದಲ್ಲಿ ಹಿಂದಿ ಹೇರಿದವರು ಕಾಂಗ್ರೆಸ್ ಪಕ್ಷದವರು, ಬಿಜೆಪಿ ಅಲ್ಲ. ಬಿಜೆಪಿ ಯಾವುದೇ ಭಾಷೆಯನ್ನ ಕಲಿಯಬಹುದು ಅಂತಾ ಸ್ವಾತಂತ್ರ್ಯ ಕೊಟ್ಟಿದೆ ಎಂದರು.
ಮುಂದಿನ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ!:ವೇದಿಕೆಯಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಆದಷ್ಟು ಬೇಗ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ತುಮಕೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿರುವ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಈ ಕುರಿತು ಸಿಎಂ ರೇಸ್ನಲ್ಲಿ ನೀವೂ ಇದ್ದೀರಾ ಅಂತಾ ಮಾಧ್ಯಮಗಳು ಪ್ರಶ್ನಿಸಿದಾಗ ಸಚಿವರು, ಸ್ವಾಮೀಜಿಗಳು ಅಭಿಮಾನದಿಂದ, ವಿಶ್ವಾಸದಿಂದ ಆಶೀರ್ವಾದ ಮಾಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಇರುವವರು ಮುಂದೆ ಒಂದ್ ದಿನ ಆಗಲಿ ಅಂದಿದ್ದಾರೆ, ಅದಕ್ಕೆ ರಾಜಕೀಯ ಅರ್ಥ ಕೊಡುವುದು ಬೇಡ ಅಂತಾ ನಗು ಮುಖದಿಂದಲೇ ಉತ್ತರ ಕೊಟ್ಟರು.
NEP ಚರ್ಚೆಗೆ ಬರಬೇಕು - ರಿಜ್ವಾನ್ ಅರ್ಷದ್ :ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್, ರಾಷ್ಟ್ರೀಯ ಶಿಕ್ಷಣ ನೀತಿ ಅಸ್ಲೆಂಬಿಯಲ್ಲೂ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು. ಎನ್‌ಇಪಿ ಅನ್ನೋದು ಸಾಮಾನ್ಯ ಪಾಲಿಸಿ ಅಲ್ಲ, ಬದಲಿಗೆ ದೇಶದ ಹಾಗೂ ಮಕ್ಕಳ ಭವಿಷ್ಯವನ್ನ ನಿರ್ಧಾರ ಮಾಡುತ್ತೆ. ಹೀಗಾಗಿ, ಗಲ್ಲಿ ಗಲ್ಲಿಯಲ್ಲೂ ಚರ್ಚೆಯಾಗಿ ನಂತರ ಅನುಷ್ಠಾನಕ್ಕೆ ಬರಬೇಕು ಅಂತಾ ಮನವಿ ಮಾಡಿದರು.