ಬೆಂಗಳೂರು :ಹಿಂದುಪರ ಸಂಘಟನೆಯ ಯುವಕ ಹರ್ಷನ ಕೊಲೆ ಕೇಸ್ನಲ್ಲಿ ಬಂಧನ ಆಗಿರುವವರಲ್ಲಿ ಮೂವರು ಶಿವಮೊಗ್ಗದವರಾಗಿದ್ದಾರೆ. ಇಬ್ಬರ ಬಗ್ಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಶಕ್ತಿಭವನದಲ್ಲಿ ಸಿಎಂ ಭೇಟಿಯಾಗಿ ಮಾತನಾಡಿದ ಅವರು, ಶಿವಮೊಗ್ಗ ಘಟನೆ ಬಗ್ಗೆ ಸಿಎಂಗೆ ವಿವರಣೆ ಕೊಟ್ಟಿದ್ದೇನೆ. ಮತ್ತೆ ಸಭೆ ಸೇರೋಣ ಎಂದು ಅವರು ಹೇಳಿದ್ದಾರೆ. ಪೊಲೀಸರು ಇಬ್ಬರ ಬಗ್ಗೆ ಶೋಧ ನಡೆಸಿದ್ದಾರೆ. ಇದರ ಹಿಂದೆ ಇನ್ನಷ್ಟು ಜಾಲ ಇರುವ ಬಗ್ಗೆಯೂ ತನಿಖೆ ಮಾಡುತ್ತಿದ್ದಾರೆ. ಮೇಲ್ನೋಟಕ್ಕೆ 5 ಮಂದಿ ಅಂತಾ ಕಾಣುತ್ತಿದೆ. ಹಿಜಾಬ್ ಪ್ರಕರಣಕ್ಕೂ ಇದಕ್ಕೂ ಲಿಂಕ್ ಇದ್ಯಾ ಎಂಬುದರ ಬಗ್ಗೆಯೂ ತನಿಖೆ ಮಾಡುತ್ತಿದ್ದಾರೆ ಎಂದರು.
ಪೊಲೀಸರು ಸಂಯಮದಿಂದ ವರ್ತಿಸಿದ್ದಾರೆ. ಒಂದು ವೇಳೆ ಫೈರ್ ಮಾಡಿದ್ರೆ ಇನ್ನೊಂದು ನಾಲ್ಕು ಹೆಣಗಳು ಬೀಳುತ್ತಿದ್ದವು. ಆ ಕೆಲಸವನ್ನು ನಮ್ಮ ಪೊಲೀಸರು ಮಾಡಲಿಲ್ಲ. ಸಂಯಮ ಕಾಯ್ದುಕೊಂಡಿದ್ದಾರೆ. ಸಂಯಮ ಮೀರಿ ವರ್ತಿಸಿ ಫೈರಿಂಗ್ ಮತ್ತು ಲಾಠಿಚಾರ್ಜ್ ಮಾಡಿದರೆ ಇನ್ನಷ್ಟು ಅನಾಹುತಗಳು ಸಂಭವಿಸುತ್ತಿತ್ತು ಎಂದರು.