ಬೆಂಗಳೂರು: ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ನಿರಾಧಾರ ಆರೋಪ ಮಾಡಿದ್ದಾರೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಬಿಜೆಪಿ ಸಾರ್ವಜನಿಕ ತಿಳುವಳಿಕೆ ಪತ್ರವನ್ನು ನೀಡಿದ್ದು, 15 ದಿನದಲ್ಲಿ ಉತ್ತರ ನೀಡಬೇಕು ಹಾಗೂ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್ಕಾರ ಒಂದು ವರ್ಷ ಪೂರೈಸಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಪ್ರತಿಪಕ್ಷ ಕಾಂಗ್ರೆಸ್ ಗೆ ಹೊಟ್ಟೆ ಉರಿ ಶುರುವಾಗಿದ್ದು, ಹೊಟ್ಟೆ ಉರಿ ಸಹಿಸದೇ ಪ್ರತಿಭಟನೆ ಮಾಡುತ್ತಿದೆ. ಸುದ್ದಿಗೋಷ್ಠಿಗಳನ್ನು ನಡೆಸಿ ಆರೋಪ-ಪ್ರತ್ಯಾರೋಪ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
20 ಪತ್ರ ಬರೆದರೂ ಒಂದಕ್ಕೂ ಉತ್ತರ ಕೊಟ್ಟಿಲ್ಲ, ಮಾಹಿತಿ ನೀಡಿಲ್ಲವೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಾಗಾದರೆ ಅಂಕಿ ಅಂಶಗಳನ್ನು ಇಟ್ಟುಕೊಂಡು ನಾಲ್ಕು ಸಾವಿರ ಕೋಟಿ ಖರ್ಚಾಗಿದೆ ಎಂದು ಹೇಗೆ ಹೇಳಿದ್ದೀರಿ. 2000 ಕೋಟಿ ಅಕ್ರಮವಾಗಿದೆ ಎಂದು ಹೇಗೆ ಹೇಳಿದ್ದೀರಿ ಎಂದು ರವಿಕುಮಾರ್ ಪ್ರಶ್ನಿಸಿದರು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಬಿಡುಗಡೆ ಮಾಡಿರುವ ಲೀಗಲ್ ನೋಟಿಸ್ ಅನ್ನು ಇದೇ ವೇಳೆ ಪ್ರದರ್ಶಿಸಿದರು.
ಸರಿಯಾದ ಮಾಹಿತಿ ಇಲ್ಲದೆ 4,467 ಕೋಟಿ ಖರ್ಚು ಮಾಡಿ 2,000 ಕೋಟಿ ಅಕ್ರಮ ಎಂದು ಹೇಳಿಕೆ ನೀಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿದ್ದೀರಿ ಎನ್ನುವ ಅಂಶವನ್ನು ನೋಟಿಸ್ ನಲ್ಲಿ ಪ್ರಸ್ತಾಪಿಸಲಾಗಿದೆ. ಸಾರ್ವಜನಿಕ ತಿಳುವಳಿಕೆ ಪತ್ರವನ್ನು ಮಾಧ್ಯಮಗಳ ಮೂಲಕವೂ ಬಿಡುಗಡೆ ಮಾಡಲಾಗಿದೆ. ಸತ್ಯಕ್ಕೆ ದೂರವಾದ ಹೇಳಿಕೆ ನೀಡಿ, ಆರೋಪ ಮಾಡಿರುವ ಬಗ್ಗೆ ಕಾರಣ ಕೇಳಿ ಲೀಗಲ್ ನೋಟಿಸ್ ನೀಡಲಾಗಿದೆ. 15 ದಿನಗಳಲ್ಲಿ ನೋಟಿಸ್ ಗೆ ಸಾರ್ವಜನಿಕವಾಗಿ ಉತ್ತರ ನೀಡಬೇಕು ಹಾಗೂ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲದೇ ಇದ್ದಲ್ಲಿ ಗಂಭೀರ ಪರಿಸ್ಥಿತಿ ಎದುರಿಸಬೇಕಾಗಲಿದೆ ಎಂದು ರವಿಕುಮಾರ್ ಎಚ್ಚರಿಕೆ ರವಾನಿಸಿದರು.