ಬೆಂಗಳೂರು:ಮನಮೋಹನ್ ಸಿಂಗ್ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿದ ನಂತರ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿದೆ ಎಂದು ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಪದೇ ಪದೆ ಪ್ರಸ್ತಾಪ ಮಾಡಿದರು. ಈ ವೇಳೆ ಅವರು ಬಿಜೆಪಿ ಸರ್ಕಾರದ ಹೆಸರು ಪ್ರಸ್ತಾಪಿಸಲು ನಿರಾಕರಿಸಿದ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ಜಟಾಪಟಿ ನಡೆಯಿತು.
ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಕಾಶ್ ರಾಥೋಡ್, ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಳ್ಳುತ್ತಲೇ ಪ್ರತಿಪಕ್ಷಗಳನ್ನು ಟೀಕಿಸಿದರು. ಬಜೆಟ್ ಅಧಿವೇಶನ ಪ್ರತಿಪಕ್ಷ ನಾಯಕರಿಲ್ಲದೇ ನಡೆಸುತ್ತಿದ್ದೇವೆ ಎಂದಿದ್ದಕ್ಕೆ ಆಡಳಿತ ಪಕ್ಷದ ಸದಸ್ಯರು ಶೇಮ್ ಶೇಮ್ ಎಂದು ಅಣಕಿಸಿದರು. ಇದಕ್ಕೆ ಕೆರಳಿದ ಬಿಜೆಪಿ ಸದಸ್ಯರು 10 ವರ್ಷದಿಂದ ಕೇಂದ್ರದಲ್ಲಿ ಪ್ರತಿಪಕ್ಷವೇ ಇಲ್ಲ ಎಂದು ಟೀಕಿಸಿದರು.
ನಂತರ ವಿಷಯ ಸಚಿವರ ಗೈರಿನತ್ತ ಹೊರಳಿತು, ಸಚಿವರ ಗೈರಿಗೆ ಪ್ರತಿಪಕ್ಷಗಳು ಟೀಕೆ ಮಾಡಿದವು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಪ್ರಾಣೇಶ್, ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದವರ ಹೆಸರು ಓದಿದರು ಇದರಲ್ಲಿ ಎಂ ಬಿ ಪಾಟೀಲ್, ಶಿವಾನಂದ ಪಾಟೀಲ್, ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ, ಕೃಷ್ಣಬೈರೇಗೌಡ, ಈಶ್ವರ ಖಂಡ್ರೆ, ವೆಂಕಟೇಶ್, ಎಂ ಸಿ ಸುಧಾಕರ್, ಡಿ. ಸುಧಾಕರ್, ಶಿವರಾಜ್ ತಂಗಡಗಿ ಇರಬೇಕಿತ್ತು. ಈಶ್ವರ ಖಂಡ್ರೆ ಮತ್ತು ಸುಧಾಕರ್ ಮಾತ್ರ ಉಪಸ್ಥಿತರಿದ್ದರು. 10 ಜನರಲ್ಲಿ 8 ಸಚಿವರು ಗೈರಾಗಿದ್ದರು. ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಸರ್ಕಾರಿ ಮುಖ್ಯ ಸಚೇತಕರಿಗೆ ಸೂಚಿಸಿದರು.
ನಂತರ ಮಾತು ಮುಂದುವರೆಸಿದ ಪ್ರಕಾಶ್ ರಾಥೋಡ್, ಅನ್ನ ಭಾಗ್ಯ ಯೋಜನೆಯ ವಿವರ ನೀಡಿದರು. 10 ಕೆಜಿ ಅಕ್ಕಿ ನೀಡುವ ಯೋಜನೆ ಪ್ರಸ್ತಾಪ ಮಾಡಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಸದಸ್ಯರು ಅಕ್ಕಿ ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ. ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿದೆ. ಆದರೆ ಕೇಂದ್ರದ ಹೆಸರು ಹೇಳಲು ಇವರಿಗೆ ಆಗುತ್ತಿಲ್ಲ, ಇವರು 10 ಕೆಜಿ ಕೊಡಬೇಕು. ಆದರೆ ಐದು ಕೆಜಿಯ ಹಣ ಕೊಡುತ್ತಿದ್ದಾರೆ. ಇವರು ಒಂದು ಕೆಜಿಯೂ ಕೊಡುತ್ತಿಲ್ಲ ಎಂದು ಟೀಕಿಸಿದರು.