ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮಾಂಡೌಸ್ ಚಂಡಮಾರುತದ ಕಾರಣ ಕರ್ನಾಟಕದ ದಕ್ಷಿಣ ಒಳನಾಡಿನ ಭಾಗದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತ ಇಂದು ಮಧ್ಯರಾತ್ರಿಯಿಂದ ತಮಿಳುನಾಡಿನ ಉತ್ತರ, ಪುದುಚೇರಿ ಮತ್ತು ಆಂಧ್ರಪ್ರದೇಶದ ಶ್ರೀಹರಿಕೋಟಾದ ತೀರ ಪ್ರದೇಶಗಳನ್ನು ಹಾದುಹೋಗಲಿದೆ. ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಹಲವೆಡೆ ಹಗುರ ಮಳೆಯಾಗುತ್ತಿದೆ ಎಂದು ಇಲಾಖೆ ಹೇಳಿದೆ.
ಚಂಡಮಾರುತದ ಪ್ರಭಾವದಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮಳೆ ಪ್ರಾರಂಭವಾಗಿದೆ.
50 ಮಿ.ಮೀ.ವರೆಗೂ ಮಳೆ:ಕೆಲವೆಡೆ ಹಗುರ ಇಲ್ಲವೇ ತುಂತುರು ಮಳೆಯಾಗುತ್ತಿದೆ. ನಾಳೆ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಸುಮಾರು 50 ಮಿ.ಮೀ.ವರೆಗೂ ಮಳೆ ಸಂಭವವಿದೆ.