ಬೆಂಗಳೂರು:ಗ್ರಾಮ ಪಂಚಾಯತ್ ಚುನಾವಣೆಯ ಮೊದಲ ಹಂತ ಮತದಾನ ಮಂಗಳವಾರ ನಡೆಯಲಿದೆ. ಈ ಹಿನ್ನೆಲೆ ಚುನಾವಣೆ ನಡೆಯುವ ಮತಕ್ಷೇತ್ರಗಳಲ್ಲಿ ಆ ದಿನ ವೇತನ ಸಹಿತ ರಜೆ ಘೋಷಿಸಿ ಸರ್ಕಾರ ಆದೇಶ ನೀಡಿದೆ.
ರಾಜ್ಯದ 30 ಜಿಲ್ಲೆಗಳ 5,728 ಗ್ರಾಮ ಪಂಚಾಯಿತಿಗಳಿಗೆ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ವೇಳಾಪಟ್ಟಿಯಂತೆ ಡಿ.22 ಮಂಗಳವಾರದಂದು ಮೊದಲನೇ ಹಂತದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಡಿ.27 ಭಾನುವಾರ ಎರಡನೇ ಹಂತದ ಮತದಾನ ನಡೆಯಲಿದೆ.
ಚುನಾವಣೆ ನಡೆಯುವ ಗ್ರಾಮ ಪಂಚಾಯತ್ ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆಗಳಲ್ಲಿ, ಎಲ್ಲ ವ್ಯವಹಾರಿಕ ಸಂಸ್ಥೆಗಳಲ್ಲಿ, ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಅರ್ಹ ಮತದಾರ ನೌಕರರಿಗೆ ಸೀಮಿತವಾದಂತೆ ಮಂಗಳವಾರದಂದು ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಯನ್ನು ನಡಸುವ) ನಿಯಮಗಳಂತೆ ವೇತನ ಸಹಿತ ರಜೆಯನ್ನು ಘೋಷಿಸಿ ಆದೇಶಿಸಲಾಗಿದೆ.
ಗ್ರಾ. ಪಂ. ಚುನಾವಣೆ : ಮತಕ್ಷೇತ್ರಗಳಲ್ಲಿ ಮಂಗಳವಾರ ವೇತನ ಸಹಿತ ರಜೆ ನೀಡಲು ಆದೇಶ ಈ ರಜೆಯು ತುರ್ತು ಸೇವೆಗಳ ಮೇಲೆ ಇರುವ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕು. ಈ ಚುನಾವಣೆ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಎಲ್ಲಾ ಸರ್ಕಾರಿ ನೌಕರರುಗಳು ಚುನಾವಣಾ ಕಾರ್ಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಲಾಗಿದೆ.