ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಪುರುಷೋತ್ತಮ್ ಆನೇಕಲ್ (ಬೆಂಗಳೂರು) :ಮುಯ್ಯಿಗೆ ಮುಯ್ಯಿ, ಸೇಡಿಗೆ ಸೇಡು ಎಂಬ ಗಾದೆ ಮಾತಿನಿಂತೆ ಬೆಂಗಳೂರಿನ ಆನೇಕಲ್-ಹೊಸೂರು ಮುಖ್ಯ ರಸ್ತೆಯ ಸಮಂದೂರು ಗೇಟ್ ಬಳಿ ಕೊಲೆಯೊಂದು ನಡೆದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ತನ್ನ ತಾಯಿಯನ್ನು ಎಂಟು ವರ್ಷಗಳ ಹಿಂದೆ ಕೊಲೆ ಮಾಡಿದ ವ್ಯಕ್ತಿಯನ್ನು ಯುವಕನೋರ್ವ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕೊಲೆಯಾದ ವ್ಯಕ್ತಿ ಸಮಂದೂರಿನ ನಾರಾಯಣಪ್ಪ ಎಂದು ಗುರುತಿಸಲಾಗಿದೆ. ಹತ್ಯೆಗೈದ ಯುವಕ ಮಧು ಎಂದು ತಿಳಿದುಬಂದಿದೆ. ಮಧು ತಾಯಿಯನ್ನು 2015ರಲ್ಲಿ ಇದೇ ನಾರಾಯಣಪ್ಪ ಹತ್ಯೆ ಮಾಡಿ ಐದು ವರ್ಷ ಜೈಲು ಶಿಕ್ಷೆ ಅನುಭವಿಸಿ 3 ವರ್ಷದ ಹಿಂದೆ ಹೊರ ಬಂದಿದ್ದ. ನಾರಾಯಣಪ್ಪ ಮತ್ತು ಮಧು ಸಂಬಂಧಿಗಳಾಗಿದ್ದು, ಮಧು ಮನೆಯ ಹತ್ತಿರ 10-15 ದಿನದಿಂದ ನಾರಾಯಣಪ್ಪ ಗುರಾಯಿಸುತ್ತಿದ್ದ. ಹೀಗಾಗಿ ತನ್ನ ತಾಯಿಯನ್ನು ಕೊಂದವನೆಂಬ ದ್ವೇಷದಿಂದ ಕೊಲೆ ಮಾಡಿದ್ದಾನೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಅತ್ತಿಬೆಲೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಆರೋಪಿ ಮಧು ಪರಾರಿಯಾಗಿದ್ದು, ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಹಳೇ ದ್ವೇಷದ ಹಿನ್ನೆಲೆ ನಡೆದ ವಾಗ್ವಾದ ಈ ಕೊಲೆಯಲ್ಲಿ ಅಂತ್ಯಗೊಂಡಿದೆ. ಘಟನೆ ಬಳಿಕ ಆರೋಪಿ ಮಧು ಎಸ್ಕೇಪ್ ಆಗಿದ್ದು ಆತನ ಬಂಧನಕ್ಕೆ ತಂಡ ರಚನೆ ಮಾಡಲಾಗಿದೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸಲಾಗುವುದು. ಎಂಎಲ್ ಪುರುಷೋತ್ತಮ್, ಗ್ರಾಮಾಂತರ ಅಡಿಷನಲ್ ಎಸ್ಪಿ.
ಪ್ರತ್ಯೇಕ ಪ್ರಕರಣ - ಭಾನುವಾರ ಉಡುಪಿಯಲ್ಲಿಒಂದೇ ಕುಟುಂಬದ ನಾಲ್ವರ ಕೊಲೆ :ಒಂದೇ ಕುಟುಂಬದ ನಾಲ್ವರನ್ನು ಭಾನುವಾರ ಉಡುಪಿ ಜಿಲ್ಲೆಯ ನೇಜಾರುವಿನ ತೃಪ್ತಿನಗರ ಎಂಬಲ್ಲಿ ಭೀಕರ ಹತ್ಯೆ ನಡೆದಿತ್ತು. ಮನೆಗೆ ನುಗ್ಗಿದ ದುಷ್ಕರ್ಮಿ ತಾಯಿ ಮತ್ತು ಮೂವರು ಮಕ್ಕಳನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದನು. ಈ ವೇಳೆ ವೃದ್ಧೆಯೊಬ್ಬರು ಗಂಭೀರ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊಲೆಯಾದವರನ್ನು ಹಸೀನಾ (46), ಅಫ್ನಾನ್ (23), ಅಯ್ನಾಝ್ (21), ಆಸಿಂ (12) ಎಂದು ಗುರುತಿಸಲಾಗಿತ್ತು. ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಅವರು ಹತ್ಯೆ ಹಿಂದೆ ದರೋಡೆ ಕೃತ್ಯದ ಶಂಕೆ ವ್ಯಕ್ತವಾಗಿದ್ದು, ಆರೋಪಿ ಬಂಧನಕ್ಕೆ ತನಿಖೆ ಆರಂಭಿಸಿದ್ದೇವೆ ಎಂದು ಹೇಳಿದ್ದರು.
ಪರಿಚಿತನನ್ನೇ ಕೊಲೆಗೈದ ಆರೋಪಿ ಬಂಧನ :ಶನಿವಾರ ಮದ್ಯಾಹ್ನ ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಹಣಕಾಸು ವಿಚಾರಕ್ಕೆ ಕೊಲೆ ನಡೆದಿತ್ತು. ತನ್ನ ಜೇಬಿನಲ್ಲಿದ್ದ ಹಣ ಯಾಕೆ ತೆಗೆದುಕೊಂಡೆ' ಎಂದಿದ್ದಕ್ಕೆ ಜಗಳ ನಡೆದು ಪರಿಚಿತನನ್ನೇ ಹತ್ಯೆ ಮಾಡಿ ನಂತರ ಚೀಲದಲ್ಲಿ ತುಂಬಿ ಶವಕ್ಕೆ ಬೆಂಕಿ ಹಾಕಲಾಗಿತ್ತು. ನಂತರ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಕಲಾಸಿಪಾಳ್ಯ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಸುಧಾರಣ್ (28) ಎಂಬಾತನನ್ನು ಆರೋಪಿ ವಿಜಯಕುಮಾರ್ (33) ಬ್ಲೇಡ್ನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದನು.
ಇದನ್ನೂ ಓದಿ :ದೊಡ್ಡಬಳ್ಳಾಪುರ: ಫೋಟೋಶೂಟ್ ವಿಚಾರಕ್ಕೆ ಗುಂಪುಗಳ ನಡುವೆ ಜಗಳ, ಯುವಕನ ಕೊಲೆ