ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಗಂಭೀರ ಮಾತುಕತೆ ನಡೆಸಿದ್ದೇವೆ. ನಗರದಲ್ಲಿ ಇನ್ನೊಮ್ಮೆ ಲಾಕ್‌ಡೌನ್ ಹೇರುವ ಬಗ್ಗೆಯೂ ಚರ್ಚೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮಲು ತಿಳಿಸಿದರು.
ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ನಾಲ್ಕು ಪ್ರದೇಶಗಳನ್ನು ಹದಿನಾಲ್ಕು ದಿನದ ಮಟ್ಟಿಗೆ ಸೀಲ್ಡೌನ್ ಮಾಡಲಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮತ್ತೊಮ್ಮೆ ಲಾಕ್‌ಡೌನ್ ಬಗ್ಗೆ ಚಿಂತಿಸಲಾಗುತ್ತದೆ. ಇದರ ಬಗ್ಗೆ ತಜ್ಞರು ಹಾಗೂ ಟಾಸ್ಕ್ ಫೋರ್ಸ್ ಸದಸ್ಯರ ಜೊತೆ ಸಭೆ ಮಾಡಿ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಲಾಗುತ್ತೆ ಎಂದರು.
ರೋಗಿಗಳ ಬಗ್ಗೆ, ಆಸ್ಪತ್ರೆಯಲ್ಲಿರುವ ವೆಂಟಿಲೇಟರ್, ಹಾಸಿಗೆಗಳ ಬಗ್ಗೆ ಮಾಹಿತಿ ಪಡೆದು, ತಕ್ಷಣ ಆಸ್ಪತ್ರೆಗೆ ಏನೇನು ಬೇಕು ಎಂಬ ಮಾಹಿತಿ ನೀಡುವಂತೆ ವೈದ್ಯರಿಗೆ ಸೂಚಿಸಿದರು. 50 ವರ್ಷಕ್ಕಿಂತ ಕೆಳಗಿನ ಸೋಂಕು ಲಕ್ಷಣರಹಿತ ರೋಗಿಗಳಿಗೆ ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತದೆ. ಹಿರಿಯ ನಾಗರಿಕರಿಗೆ ಹೆಚ್ಚಿನ ಪರೀಕ್ಷೆ ಮಾಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಲ್ಯಾಬ್ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 16 ಆಸ್ಪತ್ರೆಗಳನ್ನು ನಿಯೋಜಿತ ಕೋವಿಡ್ ಸೆಂಟರ್ಗಳಾಗಿ ನಿಗದಿಪಡಿಸಲಾಗಿದೆ. ಇವುಗಳಲ್ಲಿ 1,330 ಹಾಸಿಗೆಗಳು ಬೆಂಗಳೂರಿನಲ್ಲಿ ಲಭ್ಯವಿದ್ದು ರೋಗಿಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ 527 ಆಕ್ಸಿಜನ್ ಸಂಪರ್ಕ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. 167 ಐಸಿಯು ಬೆಡ್, 92 ವೆಂಟಿಲೇಟರ್ ಇವೆ ಎಂದು ವಿವರಿಸಿದರು.