ಬೆಂಗಳೂರು:ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಂತೆ ಸಚಿವ ಸ್ಥಾನಕ್ಕಾಗಿ ಲಾಬಿ ಶುರುವಾಗಿದೆ. ಹೈಕಮಾಂಡ್ ನಾಯಕರಲ್ಲಿ ಬೇಡಿಕೆ ಇರಿಸಲು ಆಕಾಂಕ್ಷಿಗಳು ಮುಂದಾಗಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿ ಅವಕಾಶ ವಂಚಿತ ದಾವಣಗೆರೆ ಜಿಲ್ಲೆಗೆ ಈ ಬಾರಿ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ.
ಶಾಸಕ ಎಂ.ಪಿ. ರೇಣುಕಾಚಾರ್ಯ ನೇತೃತ್ವದ ದಾವಣಗೆರೆ ಜಿಲ್ಲಾ ಶಾಸಕರ ನಿಯೋಗ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹೈಕಮಾಂಡ್ ವೀಕ್ಷಕರಾಗಿ ಆಗಮಿಸಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಯಿತು. ಈ ಬಾರಿ ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿತು.
ರೇಣುಕಾಚಾರ್ಯ ತಂಡ ಲಾಬಿ ನಡೆಸಲು ಶುರು ಮಾಡುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳು ತಮ್ಮ ತಮ್ಮ ಮಟ್ಟದಲ್ಲಿ ಲಾಬಿ ಮಾಡಲು ಶುರು ಮಾಡಿದ್ದಾರೆ. ವಲಸಿಗ ಶಾಸಕರು ನೇರವಾಗಿ ಬಸವರಾಜ ಬೊಮ್ಮಾಯಿ ಹಿಂದೆ-ಮುಂದೆ ಸುತ್ತುತ್ತಾ ಅವರ ವಿಶ್ವಾಸ ಗಳಿಸಿ ಸಂಪುಟ ಸೇರಲು ಸರ್ಕಸ್ ಮಾಡುತ್ತಿದ್ದಾರೆ. ಪಕ್ಷ ನಿಷ್ಠರು, ಸಂಘ ಪರಿವಾರದ ಸಂಘಟನಾ ನಾಯಕರು, ಪಕ್ಷದ ಹಿರಿಯ ನಾಯಕರ ಮೂಲಕ ಲಾಬಿ ಪ್ರಯತ್ನ ನಡೆಸುತ್ತಿದ್ದಾರೆ.
ಸದ್ಯ ಬೊಮ್ಮಾಯಿ ಮಾತ್ರ ಇಂದು ಪ್ರಮಾಣವಚನ ಸ್ವೀಕರಿಸಿದ್ದು, ಡಿಸಿಎಂ ಸ್ಥಾನ ಸೇರಿದಂತೆ ಸಚಿವ ಸ್ಥಾನಕ್ಕಾಗಿ ಇನ್ನಿಲ್ಲದ ಲಾಬಿ ಆರಂಭವಾಗಿದೆ. ಯಡಿಯೂರಪ್ಪ ಸಂಪುಟದಲ್ಲಿದ್ದವರು ಮತ್ತೆ ಬೊಮ್ಮಾಯಿ ಸಂಪುಟ ಸೇರಬೇಕು ಎನ್ನುವ ಪ್ರಯತ್ನ ನಡೆಸುತ್ತಿದ್ದು, ಹೊಸಬರು ಕೂಡ ಸಂಪುಟ ಸೇರಲು ಯತ್ನಿಸುತ್ತಿದ್ದಾರೆ. ಆದರೆ ಬೊಮ್ಮಾಯಿ ಯಾರಿಗೆ ಮಣೆ ಹಾಕಲಿದ್ದಾರೆ, ಹೈಕಮಾಂಡ್ ಯಾವ ಹೆಸರಿಗೆಲ್ಲಾ ಸಮ್ಮತಿಸಲಿದೆ ಕಾದು ನೋಡಬೇಕಿದೆ.