ಬೆಂಗಳೂರು: ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಲು ಬಿಜೆಪಿ ಹೈಕಮಾಂಡ್ಗೆ ಬಿಎಸ್ವೈ ಪುತ್ರ ವಿ.ವೈ ವಿಜಯೇಂದ್ರ ಹೆಸರೇ ಅಡ್ಡಿಯಾಗಿದೆ. ಹಾಗಾಗಿ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ವಿಧಾನ ಪರಿಷತ್ನ ಏಳು ಸ್ಥಾನಗಳು ಮತ್ತು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರೆದಿದೆ. ರಾಜ್ಯ ಬಿಜೆಪಿ ಕೋರ್ ಕಮಿಟಿ ಶಿಫಾರಸು ಮಾಡಿ ಕೇಂದ್ರ ಸಂಸದೀಯ ಮಂಡಳಿಗೆ ಪಟ್ಟಿ ಕಳುಹಿಸಿ ತನ್ನ ಜವಾಬ್ದಾರಿ ಮುಗಿಸಿದೆ. ಆದರೆ, ಕೇಂದ್ರಕ್ಕೆ ಈ ಬಾರಿಯ ಆಕಾಂಕ್ಷಿಗಳ ಪಟ್ಟಿ ಸಂದಿಗ್ಧ ಸ್ಥಿತಿ ಸೃಷ್ಟಿಯಾಗುವಂತೆ ಮಾಡಿದೆ.
ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ, ಎಂ. ರಾಜೇಂದ್ರ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣಾ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಕೇಶವಪ್ರಸಾದ್,ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ಧರಾಜು, ವಕ್ತಾರೆ ಮಂಜಳಾ ಸೇರಿದಂತೆ ಹಲವು ಹೆಸರುಗಳು ಕೇಂದ್ರಕ್ಕೆ ಕಳುಹಿಸಿರುವ ಪಟ್ಟಿಯಲ್ಲಿವೆ.
ಕುಟುಂಬ ರಾಜಕಾರಣ ನೈತಿಕತೆ: ವಿಜಯೇಂದ್ರಗೆ ಟಿಕೆಟ್ ಸಿಗುವ ವಿಚಾರದ ಚರ್ಚೆ ಹಳ್ಳಿಯಿಂದ ದಿಲ್ಲಿವರೆಗೂ ನಡೆಯುತ್ತಿದೆ. ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿಯೂ ಕುಟುಂಬ ರಾಜಕಾರಣದ ಬಗ್ಗೆ ಚರ್ಚೆ ನಡೆದಿದೆ. ಯಡಿಯೂರಪ್ಪ ಕುಟುಂಬದಲ್ಲಿ ಈಗಾಗಲೇ ಒಬ್ಬ ಪುತ್ರ ಸಂಸದನಾಗಿದ್ದಾರೆ ಈಗ ವಿಜಯೇಂದ್ರಗೆ ಅವಕಾಶ ನೀಡಿದರೆ ಕುಟುಂಬ ರಾಜಕಾರಣ ಟೀಕೆ ಮಾಡುವ ನೈತಿಕತೆ ನಮಗೆ ಉಳಿದಿರುವುದಿಲ್ಲ ಎನ್ನುವ ಅಂಶದ ಬಗ್ಗೆ ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ .
ಸಂಘಟನೆಯಲ್ಲಿ ಚುರುಕಾಗಿರುವ ವಿಜಯೇಂದ್ರ ಉಪ ಚುನಾವಣೆಗಳಲ್ಲಿ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ದೊಡ್ಡ ಕಾರ್ಯಕರ್ತರ ಪಡೆ ಹೊಂದಿದ್ದಾರೆ. ಯೂತ್ ಐಕಾನ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಟಿಕೆಟ್ ಕೊಟ್ಟರೆ ಕುಟುಂಬ ರಾಜಕಾರಣದ ಅಪವಾದಕ್ಕೆ ಪಕ್ಷ ಸಿಲುಕಬೇಕಿದೆ, ಕೊಡದೇ ಇದ್ದಲ್ಲಿ ಯಡಿಯೂರಪ್ಪ ವಿರೋಧ ಕಟ್ಟಿಕೊಳ್ಳಬೇಕಾಗಲಿದೆ. ಯಡಿಯೂರಪ್ಪ ಪ್ರಚಾರ ಕಾರ್ಯಕ್ಕೆ ಬಾರದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಕಷ್ಟ ಎನ್ನುವುದು ಹೈಕಮಾಂಡ್ಗೆ ಮನವರಿಕೆಯಾಗಿದೆ. ಹಾಗಾಗಿ ವರಿಷ್ಠರು ಪರಿಷತ್ ಪಟ್ಟಿ ಪ್ರಕಟಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬಹಮನಿ ಕೋಟೆಯಲ್ಲಿ ದೇವಸ್ಥಾನವಿದೆ, ಅಭಿವೃದ್ಧಿ ಪಡಿಸಿ: ಹಿಂದೂ ಮುಖಂಡರ ಆಗ್ರಹ
ಇಕ್ಕಟ್ಟಿನಲ್ಲಿ ಕೇಂದ್ರ ನಾಯಕರು:ಈವರೆಗೂ ಪರೋಕ್ಷವಾಗಿ ಪುತ್ರನ ಪರ ಲಾಬಿ ಮಾಡುತ್ತಿದ್ದ ಯಡಿಯೂರಪ್ಪ ಇದೇ ಮೊದಲ ಬಾರಿಗೆ ಕೋರ್ ಕಮಿಟಿ ಸಭೆಯಲ್ಲಿ ವಿಜಯೇಂದ್ರ ಹೆಸರನ್ನು ಪರಿಷತ್ ಚುನಾವಣೆಗೆ ಶಿಫಾರಸು ಮಾಡಬೇಕು ಎಂದು ಪ್ರಸ್ತಾಪಿಸಿದ್ದರು, ಯಾರೊಬ್ಬರೂ ಅದಕ್ಕೆ ಆಕ್ಷೇಪ ಎತ್ತದಂತೆ ನೋಡಿಕೊಂಡಿದ್ದಾರೆ. ನಾಲ್ಕು ಸ್ಥಾನದಲ್ಲಿ ಮೂರು ಸ್ಥಾನಕ್ಕೆ ಅನೇಕ ಹೆಸರು ಕಳಿಸಿದ್ದು ಒಂದು ಸ್ಥಾನಕ್ಕೆ ವಿಜಯೇಂದ್ರ ಒಬ್ಬರ ಹೆಸರನ್ನು ಮಾತ್ರವೇ ಕಳುಹಿಸಲಾಗಿದೆ. ಇದು ಹೈಕಮಾಂಡ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ ಎನ್ನಲಾಗುತ್ತಿದೆ.
ಈ ಹಿಂದೆಯೂ ಪರಿಷತ್, ರಾಜ್ಯಸಭೆ ಚುನಾವಣೆ ವೇಳೆ ಕೊನೆಯ ದಿನಕ್ಕೆ ಒಂದು ದಿನ ಮೊದಲು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ ಉದಾಹರಣೆ ಇವೆ, ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡದ ಹೆಸರನ್ನು ಅಚ್ಚರಿ ಆಯ್ಕೆ ಮಾಡಿದ್ದ ಬಿಜೆಪಿ ಈ ಬಾರಿ ಮಾತ್ರ ಗೊಂದಲಕ್ಕೆ ಸಿಲುಕಿದೆ.
ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ನಾಳೆ ಕಡೆಯ ದಿನವಾಗಿದ್ದು, ಈಗಾಗಲೇ ಮೂವರು ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಒಂದು ಸ್ಥಾನಕ್ಕೆ ಮಾತ್ರ ಆಯ್ಕೆ ಕಾಯ್ದಿರಿಸಿಕೊಳ್ಳಲಾಗಿದೆ. ಇಂದು ಸಂಜೆ ಅಥವಾ ರಾತ್ರಿ ಅಧಿಕೃತವಾಗಿ ಪಟ್ಟಿ ಬಿಡುಗಡೆಯಾಗಲಿದ್ದು, ಈ ಬಾರಿ ಹೈಕಮಾಂಡ್ ವಿಜಯೇಂದ್ರಗೆ ಮಣೆ ಹಾಕುತ್ತಾ ಕಾದು ನೋಡಬೇಕಿದೆ.