ಬೆಂಗಳೂರು :ನೈಟ್ ಕರ್ಫ್ಯೂ ಜಾರಿ, ಪೊಲೀಸರ ವಿಶೇಷ ನಿಗಾದ ನಡುವೆಯೂ ಮದ್ಯ ಮಾರಾಟದಲ್ಲಿ ಗ್ರಾಹಕರು ಕಳೆದ ಸಾರಿಯ ದಾಖಲೆಯನ್ನು ಮುರಿದಿದ್ದಾರೆ. ಅಬಕಾರಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮದ್ಯ ಬಾಕ್ಸ್ ಮಾರಾಟ ಹಾಗೂ ಆದಾಯ ಸಂಗ್ರಹದಲ್ಲಿ ಸಾಕಷ್ಟು ವೃದ್ಧಿ ಕಂಡು ಬಂದಿದೆ.
ಕಳೆದ ವರ್ಷ ಡಿಸೆಂಬರ್ 31 ರಂದು 2.25 ಲಕ್ಷ ಕಾರ್ಟನ್ ಬಾಕ್ಸ್‌ಗಳಲ್ಲಿ ಭಾರತೀಯ ನಿರ್ಮಿತ ಮದ್ಯ ಮಾರಾಟವಾಗಿದ್ದರೆ, ಈ ಬಾರಿ ಅದು 2.39 ಲಕ್ಷ ಪೆಟ್ಟಿಗೆಗಳಿಗೆ ಏರಿದೆ. ಕಳೆದ ಮೂರು ವರ್ಷಗಳ ಹಿನ್ನೆಲೆ ಗಮನಿಸಿದಾಗ ನಿನ್ನೆಯ ಮಾರಾಟ ಕೊಂಚ ಕಡಿಮೆಯಾಗಿದೆ. ಆದರೂ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ ಎಂಬುದು ಗಮನಾರ್ಹ.
2019ರಲ್ಲಿ ಡಿಸೆಂಬರ್ 31ರಂದು 3.62 ಲಕ್ಷ ಬಾಕ್ಸ್‌ಗಳು ಮಾರಾಟವಾಗಿವೆ. ಅದಕ್ಕಿಂತ ಹಿಂದಿನ ವರ್ಷ 3.82 ಲಕ್ಷ ಮಾರಾಟವಾಗಿದೆ. ಆದರೆ, 2020ರಲ್ಲಿ ಕಡಿಮೆ ಮದ್ಯ ಮಾರಾಟವಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಮದ್ಯ ಖರೀದಿಯಲ್ಲಿ ಏರಿಕೆಯಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಮುಂಚಿತವಾಗಿಯೇ ಮದ್ಯವನ್ನು ಖರೀದಿಸಿಟ್ಟುಕೊಂಡಿದ್ದರು. ಪಬ್ಗಳಲ್ಲಿ ತಡರಾತ್ರಿಯವರೆಗೂ ಮದ್ಯಸೇವನೆ ಕಂಡು ಬಂದಿಲ್ಲ. ಆದರೆ, ಇಲ್ಲಿ ಬರಬೇಕಿದ್ದ ಜನ ಬೇರೆ ಪರ್ಯಾಯ ಸ್ಥಳವನ್ನು ಹುಡುಕಿಕೊಂಡಿದ್ದಾರೆ ಹೊರತು ಮದ್ಯಪಾನವನ್ನು ನಿಲ್ಲಿಸಿಲ್ಲ ಎಂದಿದ್ದಾರೆ.
ಈ ಸಂಬಂಧ ಅಬಕಾರಿ ಇಲಾಖೆ ಅಧಿಕಾರಿಗಳು ಅಂಕಿ-ಅಂಶ ಸಮೇತ ದಾಖಲೆ ಒದಗಿಸಿದ್ದಾರೆ. ಡಿಸೆಂಬರ್ 2021ರ ಮಾಹೆಯಲ್ಲಿ 17.18 ಲಕ್ಷ ಕಾಟನ್ ಬಾಕ್ಸ್ ಮದ್ಯ ಮಾರಾಟವಾಗಿದ್ದರೆ, ಸುಮಾರು 10.13 ಲಕ್ಷ ಕಾಟನ್ ಬಾಕ್ಸ್ನಷ್ಟು ಬಿಯರ್ ಮಾರಾಟವಾಗಿದೆ. ಸರ್ಕಾರಕ್ಕೆ ಇದರಿಂದ ಹರಿದು ಬಂದಿರುವ ಆದಾಯದ ಮೊತ್ತ 977.37 ಕೋಟಿ ರೂಪಾಯಿಯಾಗಿದೆ. ಅಲ್ಲದೆ ಅಬಕಾರಿ ಇಲಾಖೆ ಆದಾಯ 639.05 ಕೋಟಿ ರೂಗಳಷ್ಟಾಗಿದೆ. ಇದು ಕಳೆದ ವರ್ಷಗಳಿಗೆ ಹೋಲಿಸಿದರೆ ಕಡೆಯ ತಿಂಗಳಲ್ಲಿ ಬಂದಿರುವ ಆದಾಯದಲ್ಲಿ ಹೆಚ್ಚಳವೇ ಆಗಿದೆ ಎಂದು ತಿಳಿಸಿದ್ದಾರೆ.
ಕಳೆದೆರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಶೇ.13ರಷ್ಟು ಮಾರಾಟದಲ್ಲಿ ವೃದ್ಧಿ ಕಂಡು ಬಂದಿದೆ. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ 844.25 ಕೋಟಿ ರೂ.ಗಳಷ್ಟು ವಹಿವಾಟು ನಡೆದಿದ್ದು, ಈ ಬಾರಿ ನೈಟ್ ಕರ್ಫ್ಯೂ ಹಾಗೂ ನಿಷೇಧಾಜ್ಞೆ ನಡುವೆಯೂ ಮದ್ಯದ ಮಾರಾಟದಲ್ಲಿ ಶೇ.13ರಷ್ಟುಹೆಚ್ಚಳವಾಗಿದೆ. ದಿನದ ಅಂತ್ಯದೊಳಗೆ 165 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆದಿದೆ.
ಅಂಕಿ-ಅಂಶ :2019ರಂದು 163.61 ಕೋಟಿ ರೂ., 2020ರಲ್ಲಿ 153.53 ಕೋಟಿ ರೂ.ಗಳಷ್ಟುವಹಿವಾಟು ನಡೆದಿತ್ತು. ರಾಜ್ಯದಲ್ಲಿ ಈ ಬಾರಿ (ಡಿ.31ರಂದು) 17.14 ಲಕ್ಷ ಕೇಸ್ ಐಎಂಎಲ್ (ಭಾರತೀಯ ಮದ್ಯ) ಮತ್ತು 1.55 ಲಕ್ಷ ಕೇಸ್ ಬಿಯರ್ (ರಾತ್ರಿ 7 ಗಂಟೆವರೆಗೆ) ಮಾರಾಟವಾಗಿದೆ. ದಿನದ ಅಂತ್ಯದೊಳಗೆ 165 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಇದು ಕಳೆದ ಎರಡು ವರ್ಷಗಳಲ್ಲೇ ವರ್ಷದ ಕೊನೆಯ ದಿನದ ಅತ್ಯಧಿಕ ವಹಿವಾಟು ಆಗಲಿದೆ ಎಂದು ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 24ರಿಂದ 31ರವರೆಗೆ ಉತ್ತಮ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದ್ದು, ಬರೋಬ್ಬರಿ 974.58 ಕೋಟಿಗಳಷ್ಟು ಮದ್ಯ ಮಾರಾಟವಾಗಿದೆ. ಡಿ. 31 ರಂದು 145ರಿಂದ 165 ಕೋಟಿ ರೂ.ಗಳಷ್ಟುಮೌಲ್ಯದ ಮದ್ಯ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.7ರಿಂದ 8ರಷ್ಟುಮಾರಾಟ ಜಾಸ್ತಿಯಾಗಿದೆ. ವರ್ಷದ ಕಡೆಯ 2 ದಿನ ಮದ್ಯ ಮಾರಾಟ ಎಷ್ಟೆಷ್ಟು ಎಂಬ ಮಾಹಿತಿ ಗಮನಿಸಿದಾಗ, 2019 ರಲ್ಲಿ 163.61 ಕೋಟಿ ರೂ., 2020 ರಲ್ಲಿ 153.53 ಕೋಟಿ ರೂ., 2021 ರಲ್ಲಿ165 ಕೋಟಿ ರೂ. ವಹಿವಾಟು ನಡೆದಿದೆ.