ಅರಣ್ಯ ಸಿಬ್ಬಂದಿ ಗಾಯಗೊಳಿಸಿ ಪರಾರಿಯಾಗಿದ್ದ ಚಿರತೆ ಕೊನೆಗೂ ಸೆರೆ ಬೆಂಗಳೂರು: ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. ಬೊಮ್ಮನಹಳ್ಳಿ ಕೃಷ್ಣಾರೆಡ್ಡಿ ಬಡಾವಣೆ ಸುತ್ತಮುತ್ತ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಬೋನಿನಲ್ಲಿ ಬಂಧಿಯಾಗಿದೆ.
ಚಿರತೆ ಕಾಣಿಸಿಕೊಂಡ ಹಿನ್ನೆಲೆ ಸೆರೆಹಿಡಿಯಲು ಟಾಸ್ಕ್ ಫೋರ್ಸ್ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಟಾಸ್ಕ್ ಫೋರ್ಸ್ ಸಿಬ್ಬಂದಿ ಧನರಾಜ್ ಎಂಬುವರು ಚಿರತೆ ದಾಳಿಯಿಂದ ಗಾಯಗೊಂಡಿದ್ದರು. ಚಿರತೆ ದಾಳಿಯಿಂದ ಧನರಾಜ್ ಕಾಲು, ಹೊಟ್ಟೆ ಭಾಗಕ್ಕೆ ಗಾಯವಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಬೊಮ್ಮನಹಳ್ಳಿ ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಿನ್ನೆ ರಾತ್ರಿ ಮತ್ತೆ ಚಿರತೆ ಕಾಣಿಸಿಕೊಂಡಿತ್ತು. ರಾತ್ರಿ ಕಾಂಪೌಂಡ್ ಜಿಗಿದು ಒಡಾಡುತ್ತಿದ್ದುದನ್ನು ಅಲ್ಲಿನ ನಿವಾಸಿಗಳು ನೋಡಿದ್ದರು. ಆತಂಕಗೊಂಡ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಚಿರತೆ ಸೆರೆ ಕಾರ್ಯಾಚರಣೆ ವೇಳೆ ಸಾರ್ವಜನಿಕರು ಸ್ಥಳಕ್ಕೆ ಬರದಂತೆ ಬಂಡೆಪಾಳ್ಯ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಸಂಪೂರ್ಣ ಬಂದ್ ಮಾಡಿದ್ದರು.
ವೈದ್ಯರ ಮೇಲೂ ಚಿರತೆ ದಾಳಿ :ಅರವಳಿಕೆ ನೀಡಲು ಬಂದಿದ್ದ ವೈದ್ಯರ ಮೇಲೂ ಚಿರತೆ ದಾಳಿ ಮಾಡಿತ್ತು. ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿತ್ತು. ಎರಡು ಬಾರಿ ಚಿರತೆಗೆ ಅರವಳಿಕೆ ಮದ್ದು ಫೈರ್ ಮಾಡಿದ್ದು, ಎರಡು ಬಾರಿಯೂ ಮಿಸ್ಫೈರ್ ಆಗಿತ್ತು. ಮೂರನೇ ಬಾರಿ ಸರಿಯಾಗಿ ಫೈರ್ ಆಗಿದ್ದು, ಚಿರತೆ ಪ್ರಜ್ಞೆ ತಪ್ಪಲು 20 ನಿಮಿಷ ಬೇಕಾಗಿದ್ದು, ಈ ಗ್ಯಾಪ್ನಲ್ಲಿ ಚಿರತೆ ಸಿಬ್ಬಂದಿ ಕಣ್ಣಿನಿಂದ ತಪ್ಪಿಸಿಕೊಂಡಿತ್ತು.
ಬಳಿಕ ಪಾಳು ಕಟ್ಟಡದ ಒಳಗೆ ಓಡಿದ್ದ ಚಿರತೆ ಕಾಣಿಸಿಕೊಳ್ಳುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಅಲರ್ಟ್ ಆಗಿತ್ತು, ಕೂಡಲೇ ಥರ್ಮಲ್ ತಂತ್ರಜ್ಞಾನದ ಡ್ರೋಣ್ ಮೂಲಕ ಕಾರ್ಯಾಚರಣೆ ಆರಂಭಿಸಿದ್ದರು. ಥರ್ಮಲ್ ಡ್ರೋಣ್ ಕ್ಯಾಮರಾದಲ್ಲೂ ಪಾಳು ಬಿದ್ದ ಕಟ್ಟಡದಲ್ಲಿ ಚಿರತೆ ಇರುವುದು ಖಾತ್ರಿಯಾಗಿತ್ತು. ಈ ಹಿನ್ನೆಲೆ ಇಡೀ ರಾತ್ರಿ ಕಣ್ಣಲ್ಲಿ ಕಣ್ಣಿಟ್ಟು ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ನಂತರ ಇಂದು ಬೆಳಗ್ಗೆ ಕಾರ್ಯಾಚರಣೆ ಮುಂದುವರಿಸಲಾಗಿತ್ತು.
ಅರಣ್ಯ ಸಿಬ್ಬಂದಿ ಮೊಹಮ್ಮದ್ ಫೈಜಾನ್ ಹೇಳಿದ್ದೇನು?: ಚಿರತೆ ಚಲನವಲನ ಗಮನಿಸಿದರೆ ಅದು ಹೆಣ್ಣು ಎಂದು ತಿಳಿದು ಬರುತ್ತದೆ. ಇನ್ನೂ ತೀಕ್ಷ್ಣವಾಗಿ ಗಮನಿಸಿದರೆ ಅದೊಂದು ಲೆಪರ್ಡ್. ಡ್ರೋನ್ ಮೂಲಕ ಗಮನಿಸಿದಾಗ ಅದು ಲೆಪರ್ಡ್ ಎಂದು ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ಹೀಗಾಗಿ ಅದು ಸಿಕ್ಕ ನಂತರ ಗೊತ್ತಾಗಿದೆ. ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರ ಕಾರ್ಯಾಚರಣೆಯಿಂದ ಚಿರತೆ ಸೆರೆ ಸಿಕ್ಕಿದೆ. ಡ್ರೋನ್ ಮೂಲಕ ಚಿರತೆ ಇರುವುದನ್ನು ಖಚಿತಪಡಿಸಿ, ಅದರ ಜಾಡು ಹಾಗೂ ಯಾವ ಕಡೆ ಚಲಿಸುತ್ತದೆ ಎಂಬುದನ್ನು ಗಮನಿಸಿ ಬೋನು ಇಡಲಾಗಿತ್ತು. ಮತ್ತು ಒಮ್ಮೆಲೇ ಅದರ ವೇಗ ಹಾಗೂ ಪರಾರಿಯಾಗುವ ಎಲ್ಲ ಮಾರ್ಗಗಳನ್ನು ಅಡ್ಡಗಟ್ಟಿ ಹಿಡಿಯುವಲ್ಲಿ ಸಫಲ ಕಂಡಿದ್ದೇವೆ. ಇದಕ್ಕೆ ನೆರವಾದವರಿಗೆ ಧನ್ಯವಾದ ಎಂದು ಅರಣ್ಯ ಸಿಬ್ಬಂದಿ ಮೊಹಮ್ಮದ್ ಫೈಜಾನ್ ತಿಳಿಸಿದ್ದಾರೆ.
ಶಾಸಕ ಸತೀಶ್ ರೆಡ್ಡಿ ಅವರು ಹೇಳಿದ್ದೇನು?: ಚಿರತೆ ಗಾರ್ಮೆಂಟ್ಸ್ ಒಳಕ್ಕೆ ನುಸುಳುವ ಸಾಧ್ಯತೆ ಇತ್ತು . ಆದರೆ, ಅರಣ್ಯಾಧಿಕಾರಿಗಳು ಅತ್ಯುನ್ನತ ತಂತ್ರಜ್ಞಾನ ಬಳಸಿ ಚಿರತೆಯ ಚಲನವಲನ ಕಂಡು ಕೊನೆಗೆ ಸೆರೆ ಹಿಡಿದಿದ್ದಾರೆ. ಅರಣ್ಯ ಪ್ರದೇಶ ಒತ್ತುವರಿ ಮಾಡಿದಂತೆಲ್ಲ ವನ್ಯಜೀವಿಗಳು ನಾಡಿನತ್ತ ಬರುತ್ತಿವೆ. ಅಲ್ಲದೇ ಚಿರತೆ ಇಲ್ಲಿಗೆ ಬರಲು ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದರು. ಗಾಯಗೊಂಡ ಸಿಬ್ಬಂದಿಗೆ ಬೊಮ್ಮನಹಳ್ಳಿ ಬಿಬಿಎಂಪಿಯಿಂದ ತಲಾ ಎರಡು ಲಕ್ಷ ಘೋಷಿಸಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ:ನೆಲಮಂಗಲದಲ್ಲಿ ಚಿರತೆ ಪತ್ತೆ; ಸಾರ್ವಜನಿಕರಲ್ಲಿ ಆತಂಕ- ವಿಡಿಯೋ