ಬೆಂಗಳೂರು : ಸೋಷಿಯಲ್ ಮಿಡಿಯಾದಲ್ಲಿ ಟ್ರಬಲ್ ಶೂಟರ್ ಬಂಧನ ಟ್ರೆಂಡ್ನಲ್ಲಿದೆ. ಡಿ.ಕೆ.ಶಿವಕುಮಾರ್ ಬಂಧನವನ್ನು ಮಾಜಿ ಸಿಎಂಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ವಿರೋಧಿಸಿದ್ದಾರೆ.
ಡಿಕೆಶಿ ಟ್ವೀಟ್ :
ನನ್ನನ್ನು ಬಂಧಿಸುವ ಉದ್ದೇಶದಲ್ಲಿ ಅಂತಿಮವಾಗಿ ಯಶಸ್ವಿಯಾದ ನನ್ನ ಬಿಜೆಪಿ ಸ್ನೇಹಿತರನ್ನು ನಾನು ಅಭಿನಂದಿಸುತ್ತೇನೆ. ನನ್ನ ವಿರುದ್ಧದ ಐಟಿ ಮತ್ತು ಇಡಿ ಪ್ರಕರಣಗಳು ರಾಜಕೀಯ ಪ್ರೇರಿತವಾಗಿದ್ದು, ನಾನು ಬಿಜೆಪಿಯ ಪ್ರತೀಕಾರ ಮತ್ತು ಮಾರಾಟದ ರಾಜಕೀಯಕ್ಕೆ ಬಲಿಯಾಗಿದ್ದೇನೆ ಎಂದು ಡಿಕೆಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಬೆಂಬಲ:
ಡಿ.ಕೆ.ಶಿವಕುಮಾರ್ ಖಂಡಿತವಾಗಿ ನಿರಪರಾಧಿಯಾಗಿ ಹೊರಬರುತ್ತಾರೆ. ಇಡೀ ದೇಶಕ್ಕೆ ಬಿಜೆಪಿಯವರ ಉದ್ದೇಶಗಳು ಅರ್ಥವಾಗುತ್ತದೆ. ಈ ಕಷ್ಟದ ಸಮಯದಲ್ಲಿ ನಾವೆಲ್ಲರೂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಇದ್ದೇವೆ. ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ. ಕೇಂದ್ರ ಸರ್ಕಾರ ಏಜೆನ್ಸಿಗಳನ್ನು ಬಳಸಿಕೊಂಡು ಪ್ರತಿಪಕ್ಷ ನಾಯಕರನ್ನು ಪ್ರತಿದಿನವೂ ಗುರಿಯಾಗಿಸಲಾಗುತ್ತಿದೆ. ಡಿಕೆ ಶಿವಕುಮಾರ್ ಪ್ರತೀಕಾರದ ರಾಜಕಾರಣಕ್ಕೆ ಬಲಿಯಾಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಕುಮಾರಸ್ವಾಮಿ ಆಕ್ರೋಶ :
ತಮ್ಮ ಹಿತಾಸಕ್ತಿಗಳಿಗೆ ಬಗ್ಗದ ಪ್ರತಿಪಕ್ಷದ ನಾಯಕರನ್ನು ಮಣಿಸಲು ಕೇಂದ್ರ ಸರ್ಕಾರ ವಿವಿಧ ಏಜೆನ್ಸಿಗಳನ್ನು ಅಕ್ರಮವಾಗಿ ಬಳಸುತ್ತಿರುವುದು ದೃಢಪಟ್ಟಿದೆ. ಹಬ್ಬದ ಆಚರಣೆಗೂ ಅವಕಾಶ ನೀಡದೇ 4 ದಿನಗಳ ಕಾಲ ನಿರಂತರ ವಿಚಾರಣೆಗೆ ಒಳಪಟ್ಟ ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ನೆಪದ ಮೇಲೆ ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.