ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಶಾಸಕರ ಸಂಖ್ಯೆಗನುಸಾರವಾಗಿ ಗೆಲ್ಲಲು ಸಾಧ್ಯವಿರುವಷ್ಟು ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಇದರಿಂದ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿಯ 4, ಕಾಂಗ್ರೆಸ್ 2 ಹಾಗೂ ಜೆಡಿಎಸ್ ನ 1 ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕಡೆಯ ದಿನವಾದ ಹೆಚ್ಚುವರಿ ಅಭ್ಯರ್ಥಿಗಳು ಯಾರೂ ಉಮೇದುವಾರಿಕೆ ಸಲ್ಲಿಸಲಿಲ್ಲ. 7 ಜನ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರ ನಾಳೆ 25 ರಂದು ನಡೆಯುವ ಪರಿಶೀಲನೆಯಲ್ಲಿ ಕ್ರಮಬದ್ಧವಾದರೆ ಚುನಾವಣೆ ಇಲ್ಲದೇ ಎಲ್ಲ 7 ಜನ ಅಭ್ಯರ್ಥಿಗಳು ಸರ್ವಾನುಮತದಿಂದ ಆಯ್ಕೆಯಾದಂತಾಗುತ್ತದೆ. ಅವಿರೋಧ ಆಯ್ಕೆ ಬಗ್ಗೆ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಂತಾಗುತ್ತದೆ.
ಬಿಜೆಪಿಯಿಂದ ನಾಮಪತ್ರ ಸಲ್ಲಿಸಿರುವ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಛಲವಾದಿ ನಾರಾಯಣ ಸ್ವಾಮಿ, ಹೇಮಲತಾ ನಾಯಕ್ ಹಾಗೂ ಕೇಶವ ಪ್ರಸಾದ್. ಕಾಂಗ್ರೆಸ್ನಿಂದ ನಾಗರಾಜ ಯಾದವ್ ಮತ್ತು ಅಬ್ದುಲ್ ಜಬ್ಬಾರ್, ಜಾತ್ಯತೀತ ಜನತಾದಳದಿಂದ ಟಿ. ಎ ಶರವಣ ಅಧಿಕೃತ ಅಭ್ಯರ್ಥಿಗಳಾಗಿ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರಗಳು ಕ್ರಮಬದ್ಧವಾದರೆ ಅಭ್ಯರ್ಥಿಗಳಾದ ಇವರೆಲ್ಲರೂ ಚುನಾವಣೆ ಇಲ್ಲದೇ ವಿಧಾನ ಪರಿಷತ್ ಪ್ರವೇಶ ಪಡೆಯಲಿದ್ದಾರೆ.