ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP) ವಿರೋಧಿಸಿ ವಿಧಾನಸೌಧ ಚಲೋ ಹಮ್ಮಿಕೊಂಡಿದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಎಲ್ಲಾ ಕಾಲೇಜುಗಳನ್ನು ಸ್ವಾಯತ್ತ ಮಾಡಿ ಖಾಸಗೀಕರಣ ಮಾಡುವುದು ಸರಿಯಲ್ಲ. ಹೊಸ ಶಿಕ್ಷಣ ನೀತಿಯಲ್ಲಿ ಆನ್ಲೈನ್ ತರಗತಿಗೆ ಹೆಚ್ಚಿನ ಆದ್ಯತೆ ಇದೆ. ಅಂಗನವಾಡಿ ಶಿಕ್ಷಣಕ್ಕೆ ಪೂರ್ತಿ ಕಡಿವಾಣ ಹಾಕಲು ನಿರ್ಧರಿಸಿದ್ದಾರೆ. ಹೀಗಾಗಿ ಶಿಕ್ಷಣ ನೀತಿಯನ್ನು ಬುಡಮೇಲು ಮಾಡುವ ನಿರ್ಧಾರವನ್ನು ಕೈಬಿಡಬೇಕೆಂದು ಆಗ್ರಹಿಸಿ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಪ್ರತಿಭಟನೆ ಆರಂಭಿಸಿದ್ದರು.
ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮೈಸೂರು, ಮಂಗಳೂರು, ಕಲಬುರಗಿ, ಚಿತ್ರದುರ್ಗ ಸೇರಿದಂತೆ ರಾಜ್ಯಾದ್ಯಂತ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ಮೈಸೂರು ಬ್ಯಾಂಕ್ ಸರ್ಕಲ್ ಬಳಿಯ ಸೇಂಟ್ ಮರ್ಥಾಸ್ ಆಸ್ಪತ್ರೆ ಬಳಿಯಿಂದ ವಿದ್ಯಾರ್ಥಿಗಳ ಜಾಥಾ ಆರಂಭವಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು.
ಇದರಿಂದ ಮೈಸೂರು ಬ್ಯಾಂಕ್ ಸುತ್ತಲಿನ ಪ್ರಮುಖ ರಸ್ತೆಗಳು ಟ್ರಾಫಿಕ್ ಜಾಂಗೆ ಸಿಲುಕಿದ್ದವು. ವಿಧಾನಸೌಧ ಚಲೋಗೆ ಮುಂದಾದ ವಿದ್ಯಾರ್ಥಿಗಳನ್ನು ಪೊಲೀಸರು ತಡೆದಾಗ, ನಿಯಂತ್ರಣಕ್ಕೆ ಬಾರದ ಕಾರಣ ಹಿರಿಯ ಪೊಲೀಸ್ ಅಧಿಕಾರಿಗಳು ಲಾಠಿಚಾರ್ಜ್ಗೆ ಆದೇಶ ನೀಡಿದರು. ಈ ವೇಳೆ 200ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಯಿತು. ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಯಿತು.
ವಿದ್ಯಾರ್ಥಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಮಾತನಾಡಿ, ವಿದ್ಯಾರ್ಥಿಗಳು ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸುತ್ತಿದ್ದರೂ ಲಾಠಿಚಾರ್ಜ್ ಆಗಿದೆ. ಸಾಕಷ್ಟು ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಸರ್ಕಾರ ನಮ್ಮ ಮನವಿಯನ್ನೂ ಸ್ವೀಕರಿಸಿಲ್ಲ. ಈ ಹಿಂದೆ ಸಚಿವ ಅಶ್ವತ್ಥ ನಾರಾಯಣ ನೂತನ ಶಿಕ್ಷಣ ನೀತಿಯ ಬಗ್ಗೆ ಮುಕ್ತ ಚರ್ಚೆಗೆ ಸಿದ್ಧ ಎಂದು ಹೇಳಿದ್ದರು. ಆದರೆ ಚರ್ಚೆಗೆ ಕರೆಯಲು ಸಿದ್ಧರಿಲ್ಲ ಎಂದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣವನ್ನು ಕೇಂದ್ರೀಕರಿಸುವುದರೊಂದಿಗೆ ಖಾಸಗೀಕರಣಕ್ಕೆ ಒತ್ತು ನೀಡುವ ಹಾಗೂ ಶಿಕ್ಷಣವನ್ನು ಕೇಸರೀಕರಣಗೊಳಿಸುವ ಹುನ್ನಾರ ಹೊಂದಿದೆ. 2016 ರಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸುಗೊಳಿಸಿದ ಸುಬ್ರಮಣ್ಯಂ ನೇತೃತ್ವದ ಸಮಿತಿಯ ವರದಿಯನ್ನು ಯಾಕಾಗಿ ಸಾರ್ವಜನಿಕಗೊಳಿಸಲಿಲ್ಲ ಹಾಗೂ ಅವರ ವರದಿಯ ಅಭಿಪ್ರಾಯಗಳನ್ನು ಯಾಕಾಗಿ ಪರಿಗಣಿಸಲಿಲ್ಲ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ ಎಂದು ಹೇಳಿದರು.
ತದನಂತರ ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ ರೂಪಿಸಲಾದ ನೀತಿಯಲ್ಲಿರುವ ಸಮಸ್ಯೆಗಳ ಕುರಿತು 2019 ರಲ್ಲಿಯೇ ಕ್ಯಾಂಪಸ್ ಫ್ರಂಟ್ ವಿರೋಧ ವ್ಯಕ್ತಪಡಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಶಿಫಾರಸು ವರದಿ ನೀಡಿತ್ತು. ಆದರೆ ನಮ್ಮ ಹಾಗೂ ಹಲವಾರು ಶಿಕ್ಷಣ ತಜ್ಞರು ನೀಡಿದ ಯಾವ ಅಭಿಪ್ರಾಯಗಳನ್ನು ಸಹ ಪರಿಗಣಿಸದೆ, ಈಗ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದೆ. ಇದನ್ನು ಒಪ್ಪಲು ಖಂಡಿತ ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ:ಕೋವಿಡ್ನಿಂದಾಗಿ ನಿಂತು ಹೋಗಿದ್ದ ಅನಕ್ಷರಸ್ಥರ ಕಲಿಕಾ ಕೇಂದ್ರ ಮರು ಆರಂಭಿಸಿದ್ದೇವೆ: ಸಚಿವ ನಾಗೇಶ್