ಕರ್ನಾಟಕ

karnataka

By

Published : Apr 14, 2023, 2:34 PM IST

Updated : Apr 14, 2023, 2:55 PM IST

ETV Bharat / state

ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ : ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸವದಿ ರಾಜೀನಾಮೆ

ಕೊನೆಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷಣ​ ಸವದಿ ಬಿಜೆಪಿ ಪಕ್ಷ ತೊರೆದಿದ್ದಾರೆ. ಕಾಂಗ್ರೆಸ್​​ ಪಕ್ಷವನ್ನು ಇಂದು ಸಂಜೆ ಸೇರ್ಪಡೆಗೊಳ್ಳಲಿದ್ದು, ಈ ಕುರಿತು ಲಕ್ಷಣ​ ಸವದಿ ಹೇಳಿಕೆ ನೀಡಿದ್ಧಾರೆ.

Lakshmana Savadi
ಲಕ್ಷ್ಮಣ ಸವದಿ

ಬೆಂಗಳೂರು:ಅಥಣಿ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದಕ್ಕೆ ಮುನಿಸಿಕೊಂಡಿದ್ದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿಕೊಟ್ಟಿರುವ ಸವದಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಪಕ್ಷದಲ್ಲಿನ ವಿವಿಧ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದೇನೆ ಎನ್ನುವ ಒಂದು ಸಾಲಿನ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.

2004, 2008, 2013 ಸೇರಿ ಮೂರು ಬಾರಿ ಅಥಣಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಲಕ್ಷ್ಮಣ ಸವದಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್​​ನ ಮಹೇಶ್ ಕುಮಟಳ್ಳಿ ವಿರುದ್ಧ ಮೊದಲ ಬಾರಿ ಸೋತಿದ್ದರು. ಬಳಿಕ 2019ರಲ್ಲಿ ಕುಮಟಳ್ಳಿ ರಾಜೀನಾಮೆ ನೀಡಿ ಬಿಜೆಪಿ ಸೇರಿದ ನಂತರ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುಮಟಳ್ಳಿ ಗೆಲುವಿಗೆ ಶ್ರಮಿಸಿದ್ದರು. ಆದರೆ ಈಗ ಪಕ್ಷದ ಟಿಕೆಟ್ ಎರಡನೇ ಬಾರಿ ನಿರಾಕರಣೆಯಾದ ಕಾರಣ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

ಲಕ್ಷಣ ಸವದಿ ರಾಜೀನಾಮೆ ಪತ್ರ

2008ರಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದ ಸವದಿ 2011ರಲ್ಲಿ ಯಡಿಯೂರಪ್ಪ ರಾಜೀನಾಮೆ ನಂತರ ಮುಖ್ಯಮಂತ್ರಿಯಾದ ಡಿ.ವಿ. ಸದಾನಂದಗೌಡ ಸಂಪುಟದಲ್ಲಿಯೂ ಸಹಕಾರ ಸಚಿವರಾಗಿದ್ದರು. 2019ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಮೂರನೇ ಬಾರಿಗೆ ಸಚಿವ ಸ್ಥಾನವನ್ನು ಅಲಂಕರಿಸಿದ ಸವದಿ ಉಪ ಮುಖ್ಯಮಂತ್ರಿ ಸ್ಥಾನದೊಂದಿಗೆ ಸಾರಿಗೆ ಇಲಾಖೆಯ ಜೊತೆ ಹೆಚ್ಚುವರಿಯಾಗಿ ಕೃಷಿ ಖಾತೆಯನ್ನೂ ಹೊಂದಿದ್ದರು. ಸೋತಿದ್ದರೂ ಪರಿಷತ್ ಸ್ಥಾನ ನೀಡಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ನಂತರ ಬಿಸಿ ಪಾಟೀಲ್ ಸಚಿವರಾದ ಬಳಿಕ ಅವರಿಗೆ ಕೃಷಿ ಖಾತೆ ನೀಡಿ,ಸಾರಿಗೆ ಖಾತೆಯಲ್ಲಿ ಸವದಿ ಮುಂದುವರೆದಿದ್ದರು, ಆದರೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು ಆದರೆ ಬೊಮ್ಮಾಯಿ ಸಂಪುಟದಲ್ಲಿ ಸವದಿಗೆ ಅವಕಾಶ ಸಿಗಲಿಲ್ಲ. ಸಂಪುಟದಿಂದ ಹೊರಗುಳಿಯಬೇಕಾಯಿತು. ಇದೀಗ ಅಥಣಿ ಕ್ಷೇತ್ರದ ಟಿಕೆಟ್ ಕೂಡ ಸಿಗದ ಹಿನ್ನಲೆಯಲ್ಲಿ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

ಸದ್ಯ ವಿಧಾನಪರಿಷತ್ ಸದಸ್ಯರಾಗಿರುವ ಲಕ್ಷ್ಮಣ ಸವದಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರೂ ಆಗಿದ್ದಾರೆ. ಪಕ್ಷದಲ್ಲಿನ ಸದಸ್ಯತ್ವದ ಜೊತೆಗೆ ಕೋರ್ ಕಮಿಟಿ ಸದಸ್ಯ ಹಾಗೂ ಕಾರ್ಯಕಾರಿಣಿ ಸದಸ್ಯ ಸ್ಥಾನ ಸೇರಿ ಎಲ್ಲ ಜವಾಬ್ದಾರಿಗಳಿಂದಲೂ ಮುಕ್ತಗೊಳಿಸುವಂತೆ ಸವದಿ ರಾಜೀನಾಮೆ ಪತ್ರ ಬರೆದಿದ್ದು, ಸಂಜೆ ಪರಿಷತ್ ಸದಸ್ಯ ಸ್ಥಾನಕ್ಕು ರಾಜೀನಾಮೆ ನೀಡುತ್ತಿದ್ದಾರೆ. ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಇಂದು ಸಂಜೆಯೇ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದು, ಕಾಂಗ್ರೆಸ್​ನಿಂದ ಅಥಣಿ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಿ ಫಾರಂ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಇದಕ್ಕೂ ಮುನ್ನ ಕುಮಾರ ಪಾರ್ಕ್ ಈಸ್ಟ್​ನಲ್ಲಿರುವ ​ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ, ಡಿಕೆ ಶಿವಕುಮಾರ್, ಸುರ್ಜೇವಾಲಾ ಜೊತೆ ಸಭೆ ಮುಗಿಸಿದ ಲಕ್ಷ್ಮಣ ಸವದಿ ನೇರವಾಗಿ ಬಿಡಿಎ ಕೇಂದ್ರ ಕಚೇರಿ ಮುಂದೆ ಇರುವ ನಿವಾಸಕ್ಕೆ ತೆರಳಿದರು. ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಅಥಣಿ ಕ್ಷೇತ್ರದ ಟಿಕೆಟ್ ನೀಡಲು ಕಾಂಗ್ರೆಸ್ ನಾಯಕರು ಸಮ್ಮತಿ ನೀಡಿದ್ದು, ಇನ್ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್ ಸೇರುತ್ತಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದಿದ್ದರು. ಬಿಜೆಪಿ ನನಗೆ ಕೊಟ್ಟ ಮಾತು ತಪ್ಪಿದೆ, ನನಗೆ ಎಂಎಲ್‌ಸಿ ಮಾಡು ಅಂದವರು ಯಾರು? ಡಿಸಿಎಂ ಮಾಡಿ ಅಂದವರು ಯಾರು? ಡಿಸಿಎಂ ತೆಗಿ ಅಂದವರು ಯಾರು? ಡಿಸಿಎಂ ಸ್ಥಾನ ಕೊಟ್ಟು ಕಿತ್ತುಕೊಂಡಾಗ ನೋವಾಯ್ತು ಎಂದಿದ್ದರು.

ಸಾರ್ವತ್ರಿಕ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಕೊಡುತ್ತೇವೆ ಅಂತ ಮಾತು ಕೊಟ್ಟಿದ್ದರು. ಆದರೆ, ಈಗ ಕೊಟ್ಟಿಲ್ಲ ಇದರಿಂದ ನಮಗೆ ನೋವಾಗಿದ್ದರೂ ಸಿಎಂ ಸಾಂತ್ವನ ಮಾಡಲಿಲ್ಲ, ಯಡಿಯೂರಪ್ಪನವರು ನನಗೆ ಕರೆ ಮಾಡಿಲ್ಲ , ನಾನು ಸೋತಾಗ ನನಗೆ ಎಂಎಲ್​ಸಿ ಮಾಡಿದರು ಮತ್ತು ಡಿಸಿಎಂ ಮಾಡಿದರು ನಾನೇನು ಕೇಳಿದ್ದೆನಾ? ಆಗ ಕೊಟ್ಟರು ಮತ್ತೆ ನನ್ನನ್ನು ತೆಗೆದರು. ಅವಾಗ ನನಗೆ ನೋವಾಗಿಲ್ವಾ? ನಾನೇನು ಅರ್ಜುನನೂ ಅಲ್ಲ ಭೀಮನು ಅಲ್ಲ ನಾನು ಯಾರ ಬಗ್ಗೆ ಟಿಕೇನೂ ಮಾಡಿಲ್ಲ, ನನಗೆ ಅನ್ಯಾಯವಾಗಿದೆ ಹಾಗಾಗಿ ನಾನು ಹೊರ ಹೋಗುತ್ತಿದ್ದೇನೆ ಎಂದು ಹೇಳಿದ್ದರು.

20 ವರ್ಷದಿಂದ ಬಿಜೆಪಿಯಲ್ಲಿ ಶಿಸ್ತು ಇದ್ದು ಕೆಲಸ ಮಾಡಿದೆ. ಕಳೆದ 18ರಲ್ಲಿ ನಾನು ಅಲ್ಪ ಮತದಿಂದ ಸೋತಿದ್ದೆ, ಉಪ ಚುನಾವಣೆಯಲ್ಲಿ ನನಗೆ ಅಥಣಿ & ಕಾಗವಾಡ ಜವಾಬ್ದಾರಿ ಕೊಟ್ಟಿದ್ರು, ಮಹೇಶ್ ಕುಮಟಳ್ಳಿಗೆ ನಾನು ಅಂದು ನಿಂತು ಗೆಲ್ಲಿಸಿದೆ. ಆದರೆ, ಅಂದು ನನಗೆ ಮುಂದಿನ ಚುನಾವಣೆಯಲ್ಲಿ ಸೀಟು ಕೊಡುತ್ತೇವೆ ಅಂದಿದ್ದರು. ನಮ್ಮ ನಾಯಕರು ನನಗೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಈಗ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸುರ್ಜೇವಾಲ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಕಾಂಗ್ರೆಸ್ ಸೇರಲು ನಾನು ಯಾವುದೇ ಡಿಮ್ಯಾಂಡ್ ಇಟ್ಟಿಲ್ಲ, ನಾನಿಟ್ಟಿರೋದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕ್ಷೇತ್ರದಲ್ಲಿ ಬಾಕಿಯಿರೋ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು ಎನ್ನುವುದು ಮಾತ್ರ. ನನಗಾಗಿ ನಾನು ಏನು ಷರತ್ತು ಹಾಕಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ, ಎಲ್ಲಾ ಜಿಲ್ಲೆಗಳಲ್ಲೂ ನನ್ನನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ನನ್ನ ಶಕ್ತಿ ಮೀರಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ ಎಂದಿದ್ದರು.

ನಾನು ನನ್ನ ಮಗನಿಗೆ ಟಿಕೆಟ್ ಕೇಳಿಲ್ಲ, ನನಗೆ ಪುತ್ರ ವ್ಯಾಮೋಹ ಇಲ್ಲ, ನಾನು ಅಥಣಿಯಿಂದ ಟಿಕೆಟ್ ಕೇಳಿದ್ದೇನೆ ಅದಕ್ಕೆ ಒಪ್ಪಿಗೆಯಾಗಿದೆ. ಈಗಾಗಲೇ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಇಂದು ಸಂಜೆ 4 ಗಂಟೆಗೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಂತರ 4:30 ಕ್ಕೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಎಂದು ಮಾಜಿ ಡಿಸಿಎಂ ಲಕ್ಷಣ ಸವದಿ ಸ್ಪಷ್ಟಪಡಿಸಿದ್ದರು.

ಬೆಳಗಾವಿ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಜೊತೆಯೂ ನಾನು ಮಾತನಾಡುತ್ತೇನೆ, ನಮ್ಮಲ್ಲಿ ಲಿಂಗಾಯತ, ವಾಲ್ಮೀಕಿ ಅನ್ನೋದು ಇಲ್ಲ, ನಾನು ಜಾತ್ಯತೀತ ನಾಯಕ ಒಂದು ಜಾತಿಗೆ ಸೀಮಿತ ಮಾಡಬೇಡಿ. ಎಲ್ಲಾ ಜಾತಿ ಧರ್ಮದ ಜೊತೆ ಸಹಬಾಳ್ವೆಯಿಂದ ಬದುಕ್ಕಿದ್ದೇವೆ ಹಾಗೆಯೇ ಮುಂದೆಯೂ ಇರುತ್ತೇನೆ, ನಾನು ಒಂದು ಜಾತಿಗೆ ಸೀಮಿತನಾದವನಲ್ಲ ಎಲ್ಲಾ ಜಾತಿ ಜನಾಂಗದ ನಾಯಕನಾಗಲು ಬಯಸುತ್ತೇನೆ ಎಂದು ಹೇಳಿದ್ದರು.

ಇದನ್ನೂ ಓದಿ:ಇಂದು ಸಂಜೆ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್​ ಸೇರುತ್ತೇನೆ: ಲಕ್ಷ್ಮಣ ಸವದಿ

Last Updated : Apr 14, 2023, 2:55 PM IST

ABOUT THE AUTHOR

...view details