ಕುರುಬ ಸಮುದಾಯದ ಪ್ರಧಾನ ಕಾರ್ಯದರ್ಶಿ ಡಿ.ವೆಂಕಟೇಶ ಮೂರ್ತಿ ಬೆಂಗಳೂರು:ಮಾಜಿ ಸಿಎಂ ಸಿದ್ದರಾಮಯ್ಯನವರ ಕುರಿತು ಮಂಡ್ಯದಲ್ಲಿ ನಡೆದಿದ್ದ ಸಾರ್ವಜನಿಕ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಸಿ.ಅಶ್ವಥ್ ನಾರಾಯಣ್ ನೀಡಿದ್ದ ಪ್ರಚೋದನಕಾರಿ ಹೇಳಿಕೆ ವಿರೋಧಿಸಿ ಕುರುಬ ಸಮುದಾಯ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಮುಖ್ಯಮಂತ್ರಿಗಳು ಕೂಡಲೇ ಅಶ್ವಥ್ ನಾರಾಯಣ್ರನ್ನು ಸಚಿವ ಸ್ಥಾನದಿಂದ ಕೈಬಿಟ್ಟು ಸೂಕ್ತ ಕಾನೂನು ಕ್ರಮ ಜರುಗಿಸದಿದ್ದಲ್ಲಿ ಸೋಮವಾರ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಪ್ರದೇಶ ಕುರುಬ ಸಮುದಾಯದ ಪ್ರಧಾನ ಕಾರ್ಯದರ್ಶಿ ಡಿ.ವೆಂಕಟೇಶ ಮೂರ್ತಿ ಎಚ್ಚರಿಕೆ ನೀಡಿದ್ದಾರೆ.
ನಗರದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವೆಂಕಟೇಶ್ ಮೂರ್ತಿ, ಸಿದ್ದರಾಮಯ್ಯ ಸರ್ವರನ್ನೂ ಸಮಾನವಾಗಿ ಕಾಣುವ ಸಮಾಜದ ಅಗ್ರಗಣ್ಯ ವ್ಯಕ್ತಿ. ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರನ್ನು ಟಿಪ್ಪು ಸುಲ್ತಾನನಿಗೆ ಹೋಲಿಸಿರುವುದು ಮತ್ತು ಟಿಪ್ಪು ಸುಲ್ತಾನನ್ನು ಉರೀಗೌಡ-ದೊಡ್ಡ ನಂಜೇಗೌಡ ಹೊಡೆದು ಕೊಲೆ ಮಾಡಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕೆಂದು ಹೇಳುವ ಮೂಲಕ ಅಶ್ವಥ್ ನಾರಾಯಣ್ ಸಾರ್ವಜನಿಕವಾಗಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಪ್ರಚೋದನೆ ನೀಡಿದ್ದಾರೆ. ಬಳಿಕ ವಿಧಾನ ಸಭೆಯಲ್ಲಿ ತಮ್ಮ ಹೇಳಿಕೆಯಲ್ಲಿ ವೈಯಕ್ತಿಕ ಉದ್ದೇಶವಿರಲಿಲ್ಲ, ಇದೊಂದು ರಾಜಕೀಯ ಉದ್ದೇಶದ ಹೇಳಿಕೆ ಎಂದಿದ್ದಾರೆ. ಸಚಿವರು ಬಹಿರಂಗವಾಗಿ ಸಿದ್ದರಾಮಯ್ಯನವರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಸಚಿವರು ಹೇಳಿದ್ದೇನು?: ಬುಧವಾರ ಮಂಡ್ಯದ ಸಾತನೂರು ಗ್ರಾಮದ ಕಂಬದ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಬಿಜೆಪಿ ಮಹಾ ಶಕ್ತಿಕೇಂದ್ರದ ಸಾರ್ವಜನಿಕ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಸಚಿವ ಅಶ್ವಥ್ ನಾರಾಯಣ ಮಾತನಾಡುತ್ತಾ, ನಿಮಗೆ ಟಿಪ್ಪು ಬೇಕಾ, ವೀರ ಸಾವರ್ಕರ್ ಬೇಕಾ? ಟಿಪ್ಪು ವಿಚಾರದಲ್ಲಿ ಸಿದ್ದರಾಮಯ್ಯನವರು ಮಾಡಿದ ರಾಜಕೀಯ ಎಲ್ಲರಿಗೂ ಗೊತ್ತಿದೆ, ಹಿಂದೂ ವಿರೋಧಿ ಟಿಪ್ಪುವನ್ನು ಎಲ್ಲಿಗೆ ಕಳುಹಿಸಬೇಕು ಹೇಳಿ, ಟಿಪ್ಪುವನ್ನು ಉರಿಗೌಡ ಮತ್ತು ದೊಡ್ಡ ನಂಜೇಗೌಡ ಏನು ಮಾಡಿದರು ಎಂದು ಪ್ರಶ್ನಿಸಿದ್ದರು. ಆಗ ಸ್ಥಳದಲ್ಲಿದ್ದ ಜನ 'ಹೊಡೆದು ಹಾಕಿದರು' ಎಂದು ಉತ್ತರಿಸಿದ್ದರು. ಬಳಿಕ ಮಾತು ಮುಂದುವರೆಸಿದ್ದ ಅಶ್ವಥ್ ನಾರಾಯಣ್ ಟಿಪ್ಪುವನ್ನು ಹೊಡೆದು ಹಾಕಿದ ರೀತಿಯಲ್ಲಿ ಇವರನ್ನೂ ಹೊಡೆದು ಹಾಕಬೇಕಲ್ಲವೇ, ಸಿದ್ದರಾಮಯ್ಯನವರನ್ನೂ ಹೊಡೆದು ಹಾಕಿ ಎಂದಿದ್ದರು.
ಇದನ್ನೂ ಓದಿ:ರಾಜಕೀಯ ನೆಲೆಯಲ್ಲಿ ಹೇಳಿದ ಮಾತುಗಳು, ಸಿದ್ದರಾಮಯ್ಯರ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ: ಸಚಿವ ಅಶ್ವತ್ಥನಾರಾಯಣ್
ಸಿದ್ದರಾಮಯ್ಯ ಗರಂ: ಸಚಿವ ಅಶ್ವತ್ಥನಾರಾಯಣ್ ಅವರ ವಿವಾದಾತ್ಮಕ ಹೇಳಿಕೆ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿ, ಸಚಿವ ಡಾ. ಅಶ್ವತ್ಥನಾರಾಯಣ ಅವರು ಮಾನಸಿಕ ಅಸ್ವಸ್ಥರ ರೀತಿ ಹೇಳಿಕೆ ನೀಡಿದ್ದು, ತಕ್ಷಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಬಂಧಿಸಬೇಕು. ಇಲ್ಲದಿದ್ದರೆ ಅಶ್ವತ್ಥನಾರಾಯಣ್ ಮಾನಸಿಕ ಅಸ್ವಸ್ಥರೇ ಎಂಬುದನ್ನು ಭಾರತೀಯ ಜನತಾ ಪಕ್ಷ ಒಪ್ಪಿಕೊಂಡಂತಾಗುತ್ತದೆ ಎಂದು ಹೇಳಿದ್ದರು.