ಕರ್ನಾಟಕ

karnataka

ETV Bharat / state

ತೃತೀಯ ರಂಗ ರಚನೆಗೆ ಮತ್ತೆ ಚಾಲನೆ ಸಿಗುವುದೇ.. ಕುಮಾರಸ್ವಾಮಿ ಹೀಗಂತಾರೆ.. - ಮಾಜಿ ಸಿಎಂ ಕುಮಾರಸ್ವಾಮಿ,

ಜಿ.ಎಸ್.ಟಿ ತೆರಿಗೆಯಲ್ಲೂ ತಮ್ಮ ಪಾಲಿನ ಹಣ ಕೊಡದ ಮೋದಿ ಸರ್ಕಾರದ ವಿರುದ್ಧ ಈ ಎಲ್ಲ ರಾಜ್ಯಗಳೂ ಸಿಟ್ಟಿಗೆದ್ದಿದ್ದವು ಎಂಬುದೂ ನಿಜ. ಕೊರೊನಾ ಕಾಲಘಟ್ಟವನ್ನು ನಿಭಾಯಿಸಲು ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದ್ದು ಕೂಡ ಬಹುತೇಕ ರಾಜ್ಯಗಳಿಗೆ ಆಕ್ರೋಶ ತಂದಿರುವುದು ಸ್ಪಷ್ಟ. ಹೀಗಾಗಿ, ಈ ಎಲ್ಲ ರಾಜ್ಯಗಳು ಕೇಂದ್ರದಲ್ಲಿ ಮರಳಿ ತೃತೀಯ ಶಕ್ತಿಗಳ ಯುಗ ಆರಂಭವಾಗಲಿ ಎಂದು ಬಯಸುತ್ತಿವೆ..

Kumaraswamy spoke about regional parties, Former cm Kumaraswamy spoke about regional parties, former cm Kumaraswamy, former cm Kumaraswamy news, ಪ್ರಾದೇಶಿಕ ಪಕ್ಷಗಳ ಬಗ್ಗೆ ಕುಮಾರಸ್ವಾಮಿ ಮಾತು, ಪ್ರಾದೇಶಿಕ ಪಕ್ಷಗಳ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತು, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿ,
ಮಹಾಘಟಬಂಧನ್‌

By

Published : May 3, 2021, 1:31 PM IST

ಬೆಂಗಳೂರು : ಮೊದಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಅಷ್ಟಾಗಿ ಕೆಲಸ ಮಾಡಿಲ್ಲವೆಂಬುದನ್ನು ಈ ಚುನಾವಣಾ ಫಲಿತಾಂಶ ತೋರಿಸಿದೆ.

ಸಂಕಷ್ಟದ ದಿನಗಳತ್ತ ಮುಖ ಮಾಡಿದ ಬಿಜೆಪಿ :ಕರ್ನಾಟಕದಲ್ಲಿ ನಡೆದ ಉಪಚುನಾವಣೆಗಳಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಎರಡು ಕಡೆ ಗೆದ್ದರೂ ಜನಬೆಂಬಲ ಕ್ಷೀಣಿಸಿದ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುರ್ಚಿ ಮೆಲ್ಲಗೆ ಅಲುಗಾಡತೊಡಗಿದೆ.

ಮಹಾಘಟಬಂಧನ್‌

ಐದು ರಾಜ್ಯಗಳಿಗೆ ಚುನಾವಣೆ ನಡೆದರೂ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ವಿಧಾನಸಭಾ ಚುನಾವಣೆಗಳ ಮೇಲೆ ದೇಶದ ಗಮನ ಇತ್ತು. ಆದರೆ, ಅಲ್ಲಿ ಅನುಕ್ರಮವಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತು ಸ್ಟಾಲಿನ್ ನೇತೃತ್ವದ ಡಿಎಂಕೆ ಗೆಲುವು ಸಾಧಿಸಿ ಅಧಿಕಾರ ಹಿಡಿದಿವೆ.

ಈ ಮಧ್ಯೆ ಬಿಜೆಪಿಗೆ ಕೇರಳದಲ್ಲಿ ತಲೆ ಎತ್ತಲು ಸಾಧ್ಯವೇ ಆಗಿಲ್ಲ. ಹೀಗಾಗಿ, ಏಳು ವರ್ಷಗಳ ನಂತರ ಇದೇ ಮೊದಲ ಬಾರಿ ಬಿಜೆಪಿ ಸಂಕಷ್ಟದ ದಿನಗಳತ್ತ ಮುಖ ಮಾಡಿದಂತಾಗಿದೆ.

ಬಿಜೆಪಿ ಲೆಕ್ಕಾಚಾರವೇನು? :ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಅಪೂರ್ವ ಗೆಲುವು ಗಳಿಸಿದ್ದೇನೋ ನಿಜ. ಆದರೆ, ಅದರ ಗೆಲುವಿಗೆ ಸಹಕಾರಿಯಾದ ರಾಜ್ಯಗಳಲ್ಲಿ ಮುಂದಿನ ಚುನಾವಣೆ ವೇಳೆಗೆ ಪಕ್ಷದ ಶಕ್ತಿ ಕುಸಿದಿರುತ್ತದೆ ಎಂಬುದು ಕಮಲ ಪಾಳೆಯದ ವರಿಷ್ಠರಿಗೆ ಗೊತ್ತಿತ್ತು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೆಹಲಿಯನ್ನು ವಶಪಡಿಸಿಕೊಳ್ಳಲು ಕಾರಣವಾದ ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕದಂತಹ ರಾಜ್ಯಗಳು ಮುಂದಿನ ಚುನಾವಣೆಯಲ್ಲಿ ದೊಡ್ಡ ಮಟ್ಟದ ಲಾಭ ತರುವುದಿಲ್ಲ ಎಂಬುದು ಅವರ ಲೆಕ್ಕಾಚಾರ.

ಕಮ್ಯೂನಿಸ್ಟರ ಬಲಿದಾನ ವ್ಯರ್ಥ :ಉತ್ತರಪ್ರದೇಶ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಗೆದ್ದ ಸೀಟುಗಳ ಸಂಖ್ಯೆ ಮುಂದಿನ ಚುನಾವಣೆಯಲ್ಲಿ ಕಡಿಮೆಯಾಗಲಿವೆ. ಹೀಗಾಗಿ, ಆಗುವ ಕೊರತೆ ನೀಗಿಸಿಕೊಳ್ಳಲು ಪಶ್ಚಿಮಬಂಗಾಳ, ತಮಿಳುನಾಡಿನಂತಹ ರಾಜ್ಯಗಳಲ್ಲಿ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂಬುದು ಅವರ ಇರಾದೆ ಆಗಿತ್ತು.

ಪಶ್ಚಿಮ ಬಂಗಾಳದಲ್ಲಿ ಕಳೆದ ಲೋಕಸಭಾ ಚುನಾವಣೆಯ ವೇಳೆಗೆ ಮಮತಾ ಬ್ಯಾನರ್ಜಿ ಶಕ್ತಿಯನ್ನು ಕುಗ್ಗಿಸಲು ಕಮ್ಯೂನಿಸ್ಟರು ಪರೋಕ್ಷವಾಗಿ ಬಿಜೆಪಿಯ ಜತೆ ಕೈ ಜೋಡಿಸಿದ್ದರ ಪರಿಣಾಮವಾಗಿ ಕಮಲ ಪಾಳೆಯ ಅಲ್ಲಿ ಝಗಮಗಿಸಿತ್ತು. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ನಡೆದ ಕಮ್ಯೂನಿಸ್ಟರ ವಲಸೆ ಈ ಬಾರಿಯೂ ತಮಗೆ ಶಕ್ತಿ ತುಂಬಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿತ್ತು.

ಆದರೆ, ಪಶ್ಚಿಮ ಬಂಗಾಳದ ಮತದಾರರು ನಿರ್ಣಾಯಕವಾಗಿ ಆ ಪಕ್ಷದ ಪಕ್ಕೆಲುಬು ಅದುರಿ ಹೋಗುವಂತೆ ಹೊಡೆತ ನೀಡಿದ್ದಾರಲ್ಲದೆ ಕಮ್ಯೂನಿಸ್ಟರ ಬಲಿದಾನ ವ್ಯರ್ಥವಾಗುವಂತೆ ಮಾಡಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ನಾಯಕರು ಕಂಗಾಲು :ಈ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಅನುಸರಿಸಿದ ತಂತ್ರದಿಂದ ರೊಚ್ಚಿಗೆದ್ದ ಮಮತಾ ಬ್ಯಾನರ್ಜಿ, ಇಲ್ಲಿ ಗೆದ್ದು ದೆಹಲಿಗೆ ಲಗ್ಗೆ ಇಡುತ್ತೇನೆ. ಪಶ್ಚಿಮ ಬಂಗಾಳದ ಆಡಳಿತವನ್ನು ಹೊರಗಿನವರು ನಡೆಸಲು ಬಿಡುವುದಿಲ್ಲ ಎಂದು ಅಬ್ಬರಿಸಿದ್ದರು.

ಮಮತಾ ಬ್ಯಾನರ್ಜಿ

ಇದೀಗ ಅವರ ಅಬ್ಬರಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆಯಲ್ಲದೆ ಏಕಕಾಲಕ್ಕೆ ಹಿಂದೆ ತಮ್ಮ ಗೆಲುವಿಗೆ ಪೂರಕವಾಗಿದ್ದ ರಾಜ್ಯಗಳಲ್ಲಿ ಕುಸಿಯುತ್ತಿರುವ ಬಿಜೆಪಿ ಅಲೆ ಮತ್ತು ಹೊಸ ಚುನಾವಣೆಗಳಲ್ಲಿ ಅನುಭವಿಸಿದ ಸೋಲು ಮೊದಲ ಬಾರಿ ಬಿಜೆಪಿಯ ರಾಷ್ಟ್ರೀಯ ನಾಯಕರು ಕಂಗಾಲಾಗುವಂತೆ ಮಾಡಿದೆ.

ತಮಿಳುನಾಡಿನಲ್ಲಿ ಡಿಎಂಕೆ ಜಯಭೇರಿ :ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರದಲ್ಲಿರಲಿಲ್ಲ ಎಂಬುದು ನಿಜ. ಆದರೆ, ಜಯಲಲಿತಾ ಸಾವಿನ ನಂತರ ಅಲ್ಲಿ ಅಧಿಕಾರ ನಡೆಸುತ್ತಿದ್ದ ಎಐಎಡಿಎಂಕೆ ಪಕ್ಷವನ್ನು ಬಿಜೆಪಿ ವರಿಷ್ಠರು ತಮ್ಮ ಮುಷ್ಟಿಯಲ್ಲಿ ಹಿಡಿದುಕೊಂಡಿದ್ದರು ಎಂಬುದು ನಿರ್ವಿವಾದ. ಅಲ್ಲಿನ ಮುಖ್ಯಮಂತ್ರಿ ಯಳಪ್ಪಾಡಿ ಪಳನಿಸ್ವಾಮಿ ದೆಹಲಿಗೆ ಹೋದರೆ ಪ್ರಧಾನಿಯ ಕಾಲಿಗೆ ಬಿದ್ದು ಬರುತ್ತಾರೆ.

ಇದಕ್ಕೆ ಅವರು ಮಾಡಿಕೊಂಡಿರುವು ಹಗರಣ ಕಾರಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ್ದ ಆರೋಪವನ್ನು ಗಮನಿಸಿದರೆ ತಮಿಳುನಾಡಿನ ರಾಜಕಾರಣದ ಮೇಲೆ ಬಿಜೆಪಿ ಯಾವ ರೀತಿಯ ಪ್ರಭಾವ ಬೀರಲು ಹೊರಟಿತ್ತು ಎಂಬುದು ಸ್ಪಷ್ಟವಾಗುತ್ತದೆ. ಆದರೆ, ಅಲ್ಲೀಗ ಕರುಣಾನಿಧಿ ಪುತ್ರ ಸ್ಟಾಲಿನ್ ನೇತೃತ್ವದ ಡಿಎಂಕೆ ಜಯಭೇರಿ ಬಾರಿಸಿದೆ.

ಎಂ.ಕೆ ಸ್ಟಾಲಿನ್​

ಅಂದ ಹಾಗೆ ದೇಶದಲ್ಲಿ ತೃತೀಯ ಶಕ್ತಿ ಅಧಿಕಾರ ಹಿಡಿಯುವುದರ ಹಿಂದೆ ಬಹುಮುಖ್ಯ ಪಾತ್ರ ವಹಿಸಿದ್ದ ಶಕ್ತಿಗಳಲ್ಲಿ ಡಿಎಂಕೆ ಕೂಡ ಒಂದು ಎಂಬುದನ್ನು ಮರೆಯಬಾರದು. ಹೀಗೆ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಟಿಎಂಸಿ ಹಾಗೂ ಡಿಎಂಕೆ ಗಳಿಸಿದ ಗೆಲುವು ದೇಶದ ಬಹುತೇಕ ರಾಜ್ಯಗಳಲ್ಲಿ ನೆಲೆಸಿರುವ ಪರಿಸ್ಥಿತಿಗೆ ಉತ್ತೇಜನ ನೀಡುವಂತಿದೆ.

ಹೆಚ್​ಡಿಕೆ ಟ್ವೀಟ್​ :ಇದಕ್ಕೆ ಪುಷ್ಠಿ ನೀಡುವಂತೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಿನ್ನೆ ಟ್ವೀಟ್ ಮಾಡಿ, ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮಣಿಸಲಾಗದು ಎಂಬ ಸಂದೇಶ ಹೊರಬಿದ್ದಿದೆ. ಅಧಿಕಾರ, ಹಣ, ಒತ್ತಡ, ಬಲ ಪ್ರಯೋಗಗಳನ್ನು ಮೆಟ್ಟಿನಿಂತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಟ್ಟಿತನ ನಮಗೆ ಮಾದರಿಯಾಗಲಿದೆ.

ಜೆಡಿಎಸ್‌ನಂತೆಯೇ ದಶಕಗಳ ಕಾಲ ರಾಜಕೀಯ ವನವಾಸ ಅನುಭವಿಸಿದ, ಸಂಕಷ್ಟ ಅನುಭವಿಸಿದ, ಕಠಿಣ ಸಂದರ್ಭದಲ್ಲೂ ಮುಂದೆ ಹೆಜ್ಜೆ ಇಡುತ್ತಲೇ ಮುಂದೆ ಸಾಗಿದ ಡಿಎಂಕೆ ಮತ್ತು ಅದರ ನಾಯಕರ ತಾಳ್ಮೆ ನಮಗೆ ಪಾಠವಾಗಲಿದೆ ಎಂದಿದ್ದರು.

ಹೆಚ್​ಡಿಕೆ ಸುಳಿವು :ಪ್ರಾದೇಶಿಕ ಅಸ್ಮಿತೆಯನ್ನು ದೇಶದ ಜನತೆ ಮತ್ತೆ ರುಜುವಾತುಪಡಿಸಿದ್ದಾರೆ. ಯಾವ ಅಧಿಕಾರ, ಹಣದ ದರ್ಪ, ಒತ್ತಡ ತಂತ್ರಗಳು, ಕುತಂತ್ರಗಳು, ಅಪಪ್ರಚಾರಗಳು ಪ್ರಾದೇಶಿಕ ಅಸ್ಮಿತೆಯನ್ನು ಚಿವುಟಿ ಹಾಕಲಾರವು. ಜನ ಮನ ಗೆದ್ದ ಪ್ರಾದೇಶಿಕ ಪಕ್ಷದ ನಾಯಕರನ್ನು ಜನತೆ ಕೈ ಹಿಡಿಯುತ್ತಾರೆ ಎಂಬುದಕ್ಕೆ ಚುನಾವಣಾ ಫಲಿತಾಂಶವೇ ತಾಜಾ ನಿದರ್ಶನ. ಜೆಡಿಎಸ್‌ ತನ್ನ ಸಾಮರ್ಥ್ಯವನ್ನು ಮರಳಿ ಸಾಬೀತು ಮಾಡಲಿದೆ ಎಂಬ ಮುಂದಿನ ಹೆಜ್ಜೆಗೆ ಹೆಚ್​ಡಿಕೆ ಸುಳಿವು ನೀಡಿದ್ದಾರೆ.

ಮೋದಿ ಯುಗದಲ್ಲಿ ಬಳಲಿದ ರಾಜ್ಯಗಳ :ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳ, ಕರ್ನಾಟಕದಂತಹ ರಾಜ್ಯಗಳನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಈ ಪೈಕಿ ಆಂಧ್ರಪ್ರದೇಶ ತೃತೀಯ ಶಕ್ತಿಗೆ ಟಾನಿಕ್ ನೀಡಿದಾಗಲೆಲ್ಲ ತನ್ನ ರಾಜ್ಯಕ್ಕೆ ಬಂಪರ್ ಯೋಜನೆಗಳನ್ನು ಪಡೆದುಕೊಂಡಿದೆ ಮತ್ತು ಕೇಂದ್ರದ ಅಧಿಕಾರದಲ್ಲಿ ಪಾಲು ಪಡೆದಿದೆ.

ಆದರೆ, ಆಂಧ್ರಪ್ರದೇಶವೇ ಇರಲಿ, ತೆಲಂಗಾಣವೇ ಇರಲಿ ಅವು ಮೋದಿ ಯುಗದಲ್ಲಿ ಸಂಪೂರ್ಣ ಬಳಲಿ ಹೋಗಿವೆ. ಅವಕ್ಕೀಗ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಮೋದಿ ಯುಗದಲ್ಲಿ ಸಾಧ್ಯವಾಗುತ್ತಿಲ್ಲ. ಇದೇ ಪರಿಸ್ಥಿತಿ ಒರಿಶಾ, ತಮಿಳುನಾಡು, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲೂ ಇದೆ.

ತೆಲಂಗಾಣ ಸಿಎಂ ಚಂದ್ರಶೇಖರ್​ ರಾವ್​ ಮತ್ತು ಮಾಜಿ ಪ್ರಧಾನಿ ದೇವೇಗೌಡ

ತೃತೀಯ ಶಕ್ತಿಗಳ ಯುಗ ಆರಂಭವೇ?:ನರೇಂದ್ರಮೋದಿ ಕಾಲದಲ್ಲಿ ಈ ರಾಜ್ಯಗಳು ಸಂಪೂರ್ಣ ಶಕ್ತಿ ಕಳೆದುಕೊಂಡಿವೆಯಷ್ಟೇ ಅಲ್ಲದೆ ತಮ್ಮ ರಾಜ್ಯಗಳ ಹಿತ ಕಾಪಾಡಿಕೊಳ್ಳುವ ವಿಷಯದಲ್ಲಿ ಮೋದಿ ಬಳಗದ ವಿರುದ್ಧ ನಿಲ್ಲಲಾಗದ ಸ್ಥಿತಿಯಲ್ಲಿದ್ದವು. ಜಿ.ಎಸ್.ಟಿ ತೆರಿಗೆಯಲ್ಲೂ ತಮ್ಮ ಪಾಲಿನ ಹಣ ಕೊಡದ ಮೋದಿ ಸರ್ಕಾರದ ವಿರುದ್ಧ ಈ ಎಲ್ಲ ರಾಜ್ಯಗಳೂ ಸಿಟ್ಟಿಗೆದ್ದಿದ್ದವು ಎಂಬುದೂ ನಿಜ.

ಕೊರೊನಾ ಕಾಲಘಟ್ಟವನ್ನು ನಿಭಾಯಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಫಲರಾಗಿದ್ದು ಕೂಡ ಬಹುತೇಕ ರಾಜ್ಯಗಳಿಗೆ ಆಕ್ರೋಶ ತಂದಿರುವುದು ಸ್ಪಷ್ಟವಾಗಿದೆ. ಹೀಗಾಗಿ, ಈ ಎಲ್ಲ ರಾಜ್ಯಗಳು ಕೇಂದ್ರದಲ್ಲಿ ಮರಳಿ ತೃತೀಯ ಶಕ್ತಿಗಳ ಯುಗ ಆರಂಭವಾಗಲಿ ಎಂದು ಬಯಸುತ್ತಿವೆ.

ಬಿಜೆಪಿಗೆ ಹೀನಾಯ ಸೋಲು :ತೃತೀಯ ರಂಗ ಎಂದರೆ ಸ್ಥೂಲ ಅರ್ಥದಲ್ಲಿ ಯುಪಿಎ ರೂಪವನ್ನೂ ಪಡೆಯಬಹುದು. ಆದರೆ, ಯುಪಿಎ ರೂಪ ಕಾಣಿಸಿಕೊಳ್ಳಲೂ ತೃತೀಯ ಶಕ್ತಿಗಳೇ ಮುಂದೆ ನಿಲ್ಲಬೇಕು. ಬಸವಕಲ್ಯಾಣ ಕ್ಷೇತ್ರದಲ್ಲಿ ಜೆಡಿಎಸ್ ನೀಡಿದ ಪರೋಕ್ಷ ಸಹಕಾರ ಬಿಜೆಪಿ ತಲೆ ಮೇಲೆತ್ತುವಂತೆ ಮಾಡಿದ್ದರೆ, ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿನ ಸೋಲು ಸ್ವತ: ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೇ ಕಂಗೆಡಿಸಿದೆ.

ಯಾಕೆಂದರೆ, ಅಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದವರು ಪ್ರತಾಪ್ ಗೌಡ ಪಾಟೀಲ್. ಅವರು ಆಪರೇಷನ್ ಕಮಲ ಕಾರ್ಯಾಚರಣೆಗೆ ಬಲಿಯಾಗಿ ಬಿಜೆಪಿ ಸೇರಿದವರು. ಆದರೆ, ಬಿಜೆಪಿ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಅವರ ಗೆಲುವು ಸಾಧ್ಯವಾಗಿಲ್ಲ.

ಇತ್ತೀಚೆಗಷ್ಟೇ ರಾಜ್ಯದ ಹತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತ್ತು. ಅದರ ಬೆನ್ನಲ್ಲಿಯೇ ಈ ಫಲಿತಾಂಶಗಳು ಬಿಜೆಪಿ ಪಾಳೆಯದ ಮೇಲೆ ನಿರಾಸೆಯ ಕಾರ್ಮೋಡ ಕವಿಯುವಂತೆ ಮಾಡಿದೆ.

ಯುಪಿಎ ಮೈತ್ರಿ ಕೂಟ ತಲೆ ಎತ್ತುವ ಸಾಧ್ಯತೆ ನಿಶ್ಚಳ :ಇಲ್ಲಿ ಯಡಿಯೂರಪ್ಪ ಶಕ್ತಿ ಕುಂದಿದ್ದರೆ ದೇಶದಲ್ಲಿ ಮತ್ತೊಮ್ಮೆ ಮಮತಾ ಬ್ಯಾನರ್ಜಿ, ಸ್ಟಾಲಿನ್, ಜಗನ್ ಮೋಹನ್ ರೆಡ್ಡಿ, ಚಂದ್ರಶೇಖರ ರಾವ್, ನವೀನ್ ಪಾಟ್ನಾಯಕ್, ಶರದ್ ಪವಾರ್, ಹೆಚ್.ಡಿ. ದೇವೇಗೌಡರಂತವರೆಲ್ಲ ಸೇರಿ ತೃತೀಯ ಶಕ್ತಿಯನ್ನು ಮೇಲಕ್ಕೆತ್ತಲು ಬಯಸುವುದು.

ಆ ಮೂಲಕ ಕಾಂಗ್ರೆಸ್ ಒಳಗೊಂಡ ಯುಪಿಎ ಮೈತ್ರಿ ಕೂಟ ತಲೆ ಎತ್ತುವ ಸಾಧ್ಯತೆಗಳು ನಿಚ್ಚಳವಾಗಿ ಕಾಣಿಸತೊಡಗಿವೆ. ಇಂತಹ ಪರಿಸ್ಥಿತಿ ಉದ್ಭವವಾಗುವುದಿಲ್ಲವೇನೋ ಎಂದು ರಾಜಕೀಯ ವಲಯಗಳು ಭಾವಿಸಿದ್ದವು. ಆದರೆ, ಇತಿಹಾಸದ ಚಕ್ರ ತಿರುಗುತ್ತಲೇ ಇರುತ್ತದೆ ಎಂಬುದನ್ನು ಚುನಾವಣೆಯ ಫಲಿತಾಂಶಗಳು ಸಾಬೀತುಪಡಿಸಿವೆ.

ತೃತೀಯ ರಂಗ ರಚನೆಗೆ ಹಿಂದೆ ನಡೆದಿತ್ತು ತಾಲೀಮು!:ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿ 2018 ರಲ್ಲಿ ವಿಧಾನಸೌಧ ಮುಂಭಾಗ ಪ್ರಮಾಣವಚನ ಸ್ವೀಕರಿಸಿದ ದಿನ, ಬಿಜೆಪಿ ವಿರೋಧಿ ಅಥವಾ ಬಿಜೆಪಿಗೆ ಪರ್ಯಾಯವಾಗಿ ರಾಷ್ಟ್ರಮಟ್ಟದಲ್ಲಿ ಮಹಾಘಟಬಂಧನ್‌ ರಚನೆ ಮಾಡುವ ಸಂದೇಶ ಬೆಂಗಳೂರಿನಿಂದಲೇ ರವಾನಿಸಲಾಗಿತ್ತು.

ಬಿಎಸ್‌ಪಿ ನಾಯಕಿ ಮಾಯಾವತಿ, ಸಮಾಜವಾದಿ ಪಕ್ಷದ ಅಖೀಲೇಶ್‌, ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಆ ದಿನದ ಕಾರ್ಯಕ್ರಮದಲ್ಲಿ ಕೇಂದ್ರಬಿಂದು ಆಗಿದ್ದರು. ಆ ಬಳಿಕ ದೆಹಲಿಗೆ ಕುಮಾರಸ್ವಾಮಿ ಭೇಟಿ ನೀಡಿದ್ದಾಗ ತೆಲುಗುದೇಶಂನ ಚಂದ್ರಬಾಬು ನಾಯ್ಡು, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಆಮ್‌ ಆದ್ಮಿ ಪಕ್ಷದ ಅರವಿಂದ್​ ಕೇಜ್ರಿವಾಲ್‌ ಜತೆಯೂ ಮಹಾಘಟಬಂಧನ್‌ ವಿಚಾರವಾಗಿಯೇ ಮಾತುಕತೆ ಸಹ ನಡೆಸಿದ್ದರು.

ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿಯೇತರ ಶಕ್ತಿಗಳನ್ನು ಒಟ್ಟುಗೂಡಿಸುವಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮುಂಚೂಣಿಯಲ್ಲಿದ್ದರು. ಈ ಎಲ್ಲ ಬೆಳವಣಿಗೆಗಳು ಬಿಜೆಪಿಯಲ್ಲಿ ಸ್ವಲ್ಪ ಮಟ್ಟಿಗೆ ಆತಂಕ ಮೂಡಿಸಿದ್ದು ಹೌದು.

ಮಹಾಮೈತ್ರಿಯ ಕನಸು ಭಗ್ನ:ಅತಿ ಹೆಚ್ಚು ಲೋಕಸಭೆ ಕ್ಷೇತ್ರ ಹೊಂದಿರುವ ಉತ್ತರಪ್ರದೇಶ ಹಾಗೂ ಬಿಹಾರ, ಕರ್ನಾಟಕ, ಪಶ್ಚಿಮ ಬಂಗಾಳ ರಾಜ್ಯಗಳ ನಾಯಕರು, ಎಡಪಕ್ಷಗಳ ಮುಖಂಡರು ಒಟ್ಟುಗೂಡಿರುವ ಬಗ್ಗೆ ರಾಷ್ಟ್ರಮಟ್ಟದ ಚರ್ಚೆಯೂ ಆಗಿತ್ತು. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ್​ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲೂ ಇದೇ ರೀತಿಯ ಮಹಾಮೈತ್ರಿಯ ರಚನೆ ಮಾಡಿಕೊಂಡು ಚುನಾವಣೆ ಎದುರಿಸುವ ಪ್ರಸ್ತಾವನೆ ಮಾತುಕತೆಗಳೂ ನಡೆದಿದ್ದವು.

ಆದರೆ, ಇದರ ನಡುವೆ ಮೊದಲಿಗೆ ತೆಲಂಗಾಣದ ಟಿಆರ್‌ಎಸ್‌ ಮಹಾಘಟಬಂಧನ್‌ನಿಂದ ಅಂತರ ಕಾಯ್ದುಕೊಂಡು ವಿಧಾನಸಭೆ ವಿಸರ್ಜನೆ ಮಾಡಿ ತನ್ನದೇ ದಾರಿ ನೋಡಿಕೊಂಡಿತು. ಇದಾದ ನಂತರ ಎನ್‌ಸಿಪಿ ಸಹ ಮಹಾಘಟಬಂಧನ್‌ ಬಗ್ಗೆ ಆಸಕ್ತಿ ತೋರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ಬಿಎಸ್‌ಪಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳದೆ ಶಾಕ್‌ ನೀಡಿದ್ದು, ಈ ಮಹಾಮೈತ್ರಿಯ ಕನಸು ಭಗ್ನಕ್ಕೆ ಕಾರಣವಾಗಿತ್ತು. ಬಿಎಸ್‌ಪಿ ನಂತರ ಎಸ್‌ಪಿ ಹಾಗೂ ಎಡ ಪಕ್ಷಗಳು ಸಹ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳದಿರುವ ಬಗ್ಗೆ ತೀರ್ಮಾನ ಮಾಡಿದ್ದವು.

ಮಹಾಘಟಬಂಧನ್‌ ರಚನೆ ಛಿದ್ರ :ಈ ಹಿಂದಿನ ಎರಡು ಲೋಕಸಭೆ ಚುನಾವಣೆ ಸಂದರ್ಭಗಳಲ್ಲಿ ತೃತೀಯ ರಂಗ ರಚನೆ ಪ್ರಸ್ತಾಪವಾಗಿ ಒಂದಷ್ಟು ಪ್ರಯತ್ನವಾಗಿ ಚುನಾವಣೆ ವೇಳೆಗೆ ಅದು ವಿಫ‌ಲವಾದ ಉದಾಹರಣೆ ಇದ್ದರೂ ಮಹಾಘಟಬಂಧನ್‌ ರಚನೆಯ ಸಾಹಸಕ್ಕೆ ಕಾಂಗ್ರೆಸ್‌ ಕೈ ಹಾಕಿತ್ತು. ಇದಕ್ಕೆ ಪೂರಕವಾಗಿ ಬಿಎಸ್‌ಪಿ, ಜೆಡಿಎಸ್‌, ಟಿಎಂಸಿ, ಎಎಪಿ, ಎನ್‌ಸಿಪಿ ಸಹ ಜತೆಗೂಡುವ ಮುನ್ಸೂಚನೆ ನೀಡಿದವು.

ಹೀಗಾಗಿ, ಮಹಾಘಟಬಂಧನ್‌ ಬಗ್ಗೆ ಕಾಂಗ್ರೆಸ್‌ಗೆ ಆಶಾಭಾವನೆ ಉಂಟಾಯಿತು. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಜತೆಗೂಡಿ ಮೈತ್ರಿ ಸರ್ಕಾರ ರಚನೆಗೆ ಅದರಲ್ಲೂ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಕಾಂಗ್ರೆಸ್‌ ಒಪ್ಪಿಕೊಂಡಿತು. ಆದರೆ, ನಂತರದ ಬೆಳವಣಿಗೆಗಳಿಂದ ಮಹಾಘಟಬಂಧನ್‌ ರಚನೆಗೆ ಮುನ್ನವೇ ಛಿದ್ರಗೊಂಡಿತ್ತು.

ನಂತರ ಬಿಜೆಪಿ ವಿರುದ್ಧ ಹೊಸದಾಗಿ ತೃತೀಯ ರಂಗ ರಚನೆಗೆ ವೇದಿಕೆ ಸಿದ್ಧ ಮಾಡಲು 2019ರಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪ್ರಯತ್ನಿಸಿದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಬಿಜೆಪಿ- ಕಾಂಗ್ರೆಸ್ಸೇತರ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರಾದರೂ ಅದು ಫಲ ಕೊಡಲಿಲ್ಲ.

ABOUT THE AUTHOR

...view details