ಕರ್ನಾಟಕ

karnataka

ETV Bharat / state

ಕೆಎಸ್​ಆರ್​ಟಿಸಿ ಸರಕು ಸಾಗಣೆ ಸೇವೆ ಡಿಸೆಂಬರ್ 15ಕ್ಕೆ ಆರಂಭ - etv bharat karnataka

KSRTC cargo services: ಕಾರ್ಗೋ ಸೇವೆಯನ್ನು ಡಿಸೆಂಬರ್ 15ರಂದು ಆರಂಭಿಸಲಾಗುತ್ತದೆ. ಇದಕ್ಕಾಗಿ 20 ಟ್ರಕ್​ಗಳನ್ನು ಖರೀದಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ksrtc-cargo-service-will-start-on-december-15-says-minister-ramalingareddy
ಕೆಎಸ್​ಆರ್​ಟಿಸಿ ಸರಕು-ಸಾಗಣೆ ಸೇವೆ ಡಿ.15ಕ್ಕೆ ಆರಂಭ

By ETV Bharat Karnataka Team

Published : Dec 8, 2023, 9:29 PM IST

ಬೆಂಗಳೂರು:ಪ್ರಯಾಣಿಕ ಸೇವೆಯಲ್ಲಿ ಇತಿಹಾಸ ನಿರ್ಮಿಸಿರುವ ಕೆಎಸ್​ಆರ್​ಟಿಸಿ ಇದೀಗ ಕಾರ್ಗೋ ಸೇವಾ ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದೆ. ಪಾರ್ಸೆಲ್ ಸೇವೆ ಒದಗಿಸಲು 20 ಟ್ರಕ್​ಗಳು ಸಿದ್ಧವಾಗಿದ್ದು, ಡಿಸೆಂಬರ್ 15ರಿಂದ ಸೇವೆ ಆರಂಭಿಸಲಿವೆ. ಇದಕ್ಕಾಗಿ 20 ಕಾರ್ಗೋ ಟ್ರಕ್ ಗಳನ್ನು ತಲಾ 17.03 ಲಕ್ಷ ರೂ.ಗಳ ವೆಚ್ಚದಲ್ಲಿ ಟಾಟಾ ಕಂಪನಿಯಿಂದ ಖರೀದಿ ಮಾಡಿದೆ. ಡಿಸೆಂಬರ್ 15ರಂದು ಶಾಂತಿನಗರದಲ್ಲಿರುವ ಕೆಎಸ್ಆರ್​ಟಿಸಿ ಡಿಪೋದಲ್ಲಿ ಕಾರ್ಗೋ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಲಿದ್ದಾರೆ.

ಸೇವೆ ಹೇಗೆ?:ಪಾರ್ಸಲ್​ಗಳನ್ನು ಆನ್​ಲೈನ್​ನಲ್ಲಿ ಬುಕ್ ಮಾಡಿದರೆ ಬುಕಿಂಗ್ ಮಾಡಿದ ಸ್ಥಳದಿಂದ ಕೆಎಸ್ಆರ್​ಟಿಸಿ ಕಾರ್ಗೋ ಸೇವೆ ಒದಗಿಸುವ ಟ್ರಕ್ ಗಳು ಬಂದು ಸಂಗ್ರಹ ಮಾಡಿಕೊಂಡು ತಲುಪಿಸಬೇಕಾದ ಸ್ಥಳಕ್ಕೆ ಸಾಗಾಣಿಕೆ ಮಾಡಲಿವೆ. ಹೀಗಾಗಿ ಕಾರ್ಗೋ ಸೇವೆ ಪಡೆಯಲು ಬಸ್ ನಿಲ್ದಾಣಕ್ಕೆ ಬರುವ ಅವಶ್ಯಕತೆ ಇಲ್ಲ. 20 ಕಾರ್ಗೋ ಟ್ರಕ್​​ಗಳು 6 ಟನ್ ಸಾಗಾಣಿಕೆಯ ಸಾಮರ್ಥ್ಯ ಹೊಂದಿವೆ. ಹೆಚ್ಚಿನ ಪಾರ್ಸೆಲ್ ಇರುವ ಸ್ಥಳ ಹಾಗೂ ಮಾರ್ಗಕ್ಕೆ ಈ ಟ್ರಕ್​ಗಳನ್ನು ಬಳಕೆ ಮಾಡಿಕೊಂಡು ಪಾರ್ಸೆಲ್ ಸಾಗಾಣಿಕೆ ಮಾಡಲಿದೆ. ಅಧಿಕ ಭಾರ ಹಾಗೂ ಅಧಿಕ ಪ್ರಮಾಣದ ಪಾರ್ಸೆಲ್ ಸಾಗಾಣಿಕ ಮಾಡುವ ಮಾರ್ಗ ಗುರುತಿಸಿ ಟ್ರಕ್‌ಗಳ ಸಂಚಾರಕ್ಕೆ ಕೆಎಸ್​ಆರ್​ಟಿಸಿ ವ್ಯವಸ್ಥೆ ಮಾಡಲಿದೆ.

100 ಕೋಟಿ ಆದಾಯದ ಗುರಿ:ಕೆಲ ವರ್ಷಗಳ ಹಿಂದೆಯೇ ಕಾರ್ಗೋ ಸೇವೆಯನ್ನು ನಿಗಮ ಸಣ್ಣದಾಗಿ ಆರಂಭಿಸಲಾಗಿತ್ತು. ಆರಂಭಿಕ ಹಂತವಾಗಿ 109 ಕೇಂದ್ರಗಳಲ್ಲಿ ಈ ಸೇವೆ ಆರಂಭಿಸಿ ಹಂತ-ಹಂತವಾಗಿ ರಾಜ್ಯದ ಎಲ್ಲಾ ಪ್ರಮುಖ ನಿಲ್ದಾಣಗಳಿಗೂ ವಿಸ್ತರಿಸಿತ್ತು. ಈ ಪಾರ್ಸೆಲ್ ಸೇವೆಯನ್ನು ಬಸ್​ಗಳ ಟ್ರಂಕ್‌ನಲ್ಲಿ ಲಗೇಜ್​ ಹಾಕಿಕೊಂಡೇ ಸೇವೆ ಒದಗಿಸಲಾಗುತ್ತಿತ್ತು. ಮೊದಲ ಪ್ರಯತ್ನವನ್ನು ಟೆಂಡರ್ ನೀಡಿದಾಗ ಕೆಎಸ್ಆರ್​ಟಿಸಿಗೆ 4 ಕೋಟಿ ರೂಪಾಯಿ ಆದಾಯ ಬರುತ್ತಿತ್ತು. ಇದನ್ನು ನೋಡಿದ ಕೆಎಸ್ಆರ್​ಟಿಸಿ ನೇರವಾಗಿ ನಿಗಮದಿಂದಲೇ ಕಾರ್ಗೋ ಸೇವೆ ಆರಂಭಿಸಿತು. ಇದೀಗ ಆದಾಯ 30 ಕೋಟಿಗೆ ತಲುಪಿದೆ. ಈಗ ಅಧಿಕೃತವಾಗಿ ಪ್ರತ್ಯೇಕ ಕಾರ್ಗೋ ಸೇವೆಯನ್ನೇ ಪರಿಚಯಿಸುತ್ತಿದ್ದು, ವಾರ್ಷಿಕ 100 ಕೋಟಿ ರೂ. ಆದಾಯ ಸಂಗ್ರಹದ ಗುರಿ ಹಾಕಿಕೊಂಡಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, "ಕಾರ್ಗೋ ಸೇವೆಯನ್ನು ಡಿಸೆಂಬರ್ 15ರಂದು ಆರಂಭಿಸಲಾಗುತ್ತದೆ. ಈಗಾಗಲೇ ಕಾರ್ಗೋ ಸೇವೆಗಾಗಿ 20 ಟ್ರಕ್‌ಗಳನ್ನು ಖರೀದಿಸಿದ್ದು, ಪುಣೆಯಿಂದ ರಾಜ್ಯಕ್ಕೆ ಆಗಮಿಸುತ್ತಿವೆ. 5-6 ಟನ್ ಸರಕನ್ನು ಈ ಕಾರ್ಗೋಗಳಲ್ಲಿ ಸಾಗಾಣಿಕೆ ಮಾಡಲಾಗುತ್ತದೆ" ಎಂದು ತಿಳಿಸಿದರು.

ಎಲ್ಲೆಲ್ಲಿ ಸೇವೆ?:ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗ, ಹೊಸಪೇಟೆ ಸೇರಿದಂತೆ ಹೆಚ್ಚು ಸರಕು ಸಾಗಾಣಿಕೆ ಬೇಡಿಕೆ ಇರುವ ಮಾರ್ಗಗಳಲ್ಲಿ ಕಾರ್ಗೋ ಸೇವೆ ಒದಗಿಸಲಾಗುತ್ತದೆ. ಬೇಡಿಕೆಯನುಸಾರವಾಗಿ ಟ್ರಕ್‌ಗಳ ಖರೀದಿಯನ್ನು ಮತ್ತಷ್ಟು ಹೆಚ್ಚಿಸಲಿದ್ದು, ಹಂತ ಹಂತವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಕೆಎಸ್ಆರ್​ಟಿಸಿಯ ಕಾರ್ಗೋ ಟ್ರಕ್​ಗಳು ತಲುಪಲಿವೆ ಎಂದು ಕೆಎಸ್ಆರ್​ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಡಿಸೆಂಬರ್‌ 1ರಿಂದ ಶಬರಿಮಲೆಗೆ KSRTC ವೋಲ್ವೊ ಬಸ್‌ ಸೇವೆ ಆರಂಭ

ABOUT THE AUTHOR

...view details