ಬೆಂಗಳೂರು :ಬೆಳಗಾವಿ ಲೋಕಸಭೆ ಟಿಕೆಟ್ ಬಗ್ಗೆ ಸಮಗ್ರ ಚರ್ಚೆಯಾಗಿದೆ. ನನ್ನ ಜೊತೆ ಇನ್ನಿಬ್ಬರ ಹೆಸರು ರವಾನಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸಭೆ ಬಳಿಕ ಮಾತನಾಡಿದ ಅವರು, ನನಗಿಷ್ಟ ಇದೆಯೋ ಇಲ್ಲವೋ ಅನ್ನೋದು ಅಲ್ಲ. ಪಕ್ಷ ಬಯಸಿದರೆ ಸ್ಪರ್ಧೆ ಮಾಡಬೇಕಾಗುತ್ತದೆ. ನಾನು ಕೂಡ ಒಮ್ಮೆ ಹೈಕಮಾಂಡ್ ಭೇಟಿ ಮಾಡುತ್ತೇನೆ. ನಂತರ ಚುನಾವಣೆ ಸ್ಪರ್ಧೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಪ್ರಕಾಶ್ ಹುಕ್ಕೇರಿ ಹೆಸರು ಕೂಡ ದೆಹಲಿಗೆ ಕಳುಹಿಸಿದ್ದಾರೆ. ಅವರು ಈ ಸಭೆಗೆ ಬಂದಿಲ್ಲ ಅಂತಾ ಅಸಮಾಧಾನ ಇಲ್ಲ. ಯಾರೇ ಅಭ್ಯರ್ಥಿಯಾದರೂ ಗೆಲುವಿಗಾಗಿ ಪ್ರತಿಯೊಬ್ಬರು ಶ್ರಮಿಸುತ್ತೇವೆ ಎಂದರು.
ಚುನಾವಣಾ ಉಸ್ತುವಾರಿ ನೇಮಕ :ಮೂರು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್‌ನಿಂದ ಚುನಾವಣಾ ಉಸ್ತುವಾರಿಗಳ ನೇಮಕ ಮಾಡಲಾಗಿದೆ. ಮಾಜಿ ಸಚಿವ ಎಂ ಬಿ ಪಾಟೀಲ್‌ಗೆ ಬೆಳಗಾವಿ ಜವಾಬ್ದಾರಿ, ಬಸವಕಲ್ಯಾಣಕ್ಕೆ ಈಶ್ವರ್ ಖಂಡ್ರೆ, ಮಸ್ಕಿ ಕ್ಷೇತ್ರಕ್ಕೆ ಆರ್ ಧೃವನಾರಾಯಣ್ ಉಸ್ತುವಾರಿಯಾಗಿ ನಿಯೋಜನೆಗೊಂಡಿದ್ದಾರೆ.
ತಕ್ಷಣದಿಂದಲೇ ಇವರು ಕ್ಷೇತ್ರಕ್ಕೆ ತೆರಳಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಸ್ಥಳೀಯ ಕಾಂಗ್ರೆಸ್ ನಾಯಕರು ಕಾರ್ಯಕರ್ತರ ಜೊತೆ ಸಂವಹನ ನಡೆಸಿ ಪಕ್ಷ ಬಲವರ್ಧನೆ, ಚುನಾವಣೆ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.