ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷ ನೇಮಕ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರು ಮತ್ತೊಂದು ಸುತ್ತು ದೆಹಲಿಗೆ ತೆರಳುವ ಸಾಧ್ಯತೆ ಇದೆ.
ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ಗೊಂದಲ ಅಷ್ಟು ಸುಲಭವಾಗಿ ಬಗೆ ಹರಿಯುವ ಲಕ್ಷಣ ಕಾಣುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ನೇಮಕ ಸಂಬಂಧ ಕಾಂಗ್ರೆಸ್ನಲ್ಲಿ ಬಣಗಳು ಸೃಷ್ಟಿಯಾಗಿದ್ದು, ಒಬ್ಬೊಬ್ಬ ನಾಯಕರು ಒಂದೊಂದು ದಿಕ್ಕು ಎಂಬಂತಾಗಿದೆ.
ಹೀಗಾಗಿ ಎರಡೂ ಬಣದ ನಾಯಕರನ್ನು ಒಟ್ಟಿಗೆ ಕರೆಸಿ ಮಾತನಾಡುವಂತೆ ಕೈ ನಾಯಕರು ಹೈಕಮಾಂಡ್ಗೆ ಒತ್ತಾಯ ಮಾಡಿದ್ದಾರೆ. ನೂತನ ಅಧ್ಯಕ್ಷರಾಗುವವರನ್ನು ಕರೆದು ಮಾತನಾಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಗೊಂದಲ ಬಗೆಹರಿಸದೇ ಅಧ್ಯಕ್ಷರ ಘೋಷಣೆ ಮಾಡಿದರೆ ಹೊಸ ಅಧ್ಯಕ್ಷರ ಕಾರ್ಯಕ್ಕೂ ಅಡ್ಡಿಯಾಗಬಹುದು. ಬಣ ರಾಜಕೀಯ ಸರಿಪಡಿಸುವುದೇ ನೂತನ ಅಧ್ಯಕ್ಷರಿಗೆ ಸವಾಲಾಗಬಹುದು ಎಂಬುದು ಕೈ ನಾಯಕರ ಆತಂಕವಾಗಿದೆ.
ಹೀಗಾಗಿ ಎಲ್ಲ ನಾಯಕರನ್ನೂ ಒಟ್ಟಿಗೆ ಕರೆದು ಸಭೆ ನಡೆಸಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ಗೆ ಒತ್ತಡ ಹೇರಿದ್ದಾರೆ. ದೆಹಲಿಗೆ ನಾಯಕರನ್ನು ಕರೆಸಿ ಮಾತನಾಡಿದ ಬಳಿಕವೇ ಅಧ್ಯಕ್ಷ, ಕಾರ್ಯಾಧ್ಯಕ್ಷರ ಘೋಷಣೆಯಾಗಲಿ ಎಂದ ಮನವಿ ಮಾಡಿದ್ದಾರೆ. ಈ ಸಲಹೆಯನ್ನು ಹೈ ಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಮತ್ತೊಂದು ಸುತ್ತು ರಾಜ್ಯಕ್ಕೆ ವೀಕ್ಷಕರನ್ನು ಕಳುಹಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.