ಬೆಂಗಳೂರು : ಪುನೀತ್ ರಾಜ್‍ಕುಮಾರ್ ಅವರನ್ನು ರಾಜಕಾರಣಕ್ಕೆ ತರಬೇಕು ಎಂದು ಸಾಕಷ್ಟು ಪ್ರಯತ್ನಪಟ್ಟಿದ್ದೆವು. ಅವರು ನಟನೆ, ಚಿತ್ರರಂಗ ಬಿಟ್ಟು ಬೇರೆ ಆಲೋಚನೆ ಮಾಡಲೇ ಇಲ್ಲ. ಭಗವಂತ ಇಷ್ಟು ಕ್ರೂರತನ ಪ್ರದರ್ಶಿಸಬಾರದಿತ್ತು. ನಾವು ಯಾರನ್ನು ನಂಬಬೇಕು ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಇಂದು ದೊಡ್ಡ ಆಘಾತದ ದಿನ. ಮನುಷ್ಯ ಹುಟ್ಟುವಾಗ ಉಸಿರಿರುತ್ತದೆ. ಆದರೆ, ಹೆಸರಿರುವುದಿಲ್ಲ. ಸಾಯುವಾಗ ಹೆಸರು ಇರುತ್ತದೆ, ಉಸಿರು ಇರುವುದಿಲ್ಲ. ನನ್ನ ನೆರೆ ಮನೆಯ ಆಪ್ತಸ್ನೇಹಿತ ಪುನೀತ್. ಅವರ ಸರಳತೆ ಇಡೀ ಸಮಾಜಕ್ಕೆ ಮಾದರಿ. ನಕ್ಷತ್ರದಂತೆ ಇದ್ದ ಯುವಕನಿಗೆ ಈ ರೀತಿ ಆಗಿರುವುದು ವಿಧಿ ಎಷ್ಟು ಕ್ರೂರಿ ಎಂಬುದಕ್ಕೆ ಸಾಕ್ಷಿ. ಪುನೀತ್ ಅವರಲ್ಲಿ ನಾನು ಯಾವುದೇ ಕೆಟ್ಟ ಹವ್ಯಾಸ ನೋಡಿರಲಿಲ್ಲ. ಅವರನ್ನು ರಾಜಕಾರಣಕ್ಕೆ ತರಬೇಕು ಎಂದು ಸಾಕಷ್ಟು ಪ್ರಯತ್ನಪಟ್ಟಿದ್ದೇವೆ ಎಂದು ಸ್ಮರಿಸಿದ್ದಾರೆ.