ಬೆಂಗಳೂರು: ಡಿ.ಜೆ. ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಯ ವಸ್ತುಸ್ಥಿತಿಯ ಅಧ್ಯಯನಕ್ಕಾಗಿ ಡಾ.ಜಿ. ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸತ್ಯಶೋಧನಾ ಸಮಿತಿಯು ತನ್ನ ಅಧ್ಯಯನ ವರದಿ ಸಲ್ಲಿಸಿತು.
ಸಮಿತಿ ಅಧ್ಯಕ್ಷರಾದ ಡಾ. ಜಿ. ಪರಮೇಶ್ವರ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ವರದಿ ಸಲ್ಲಿಸಿದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ನಸೀರ್ ಅಹಮದ್ ಹಾಜರಿದ್ದರು.
ಮೂವರು ಮಾಜಿ ಗೃಹ ಸಚಿವರಾದ ಡಾ ಜಿ ಪರಮೇಶ್ವರ್, ರಾಮಲಿಂಗಾರೆಡ್ಡಿ ಹಾಗೂ ಕೆಜೆ ಜಾರ್ಜ್ ಅವರನ್ನು ಒಳಗೊಂಡ ತಂಡವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಚಿಸಿದ್ದರು. ಪರಮೇಶ್ವರ್ ನೇತೃತ್ವದಲ್ಲಿ ಸಮಿತಿ ಕಳೆದ ಒಂದು ತಿಂಗಳಿಂದ ಅಧ್ಯಯನ ನಡೆಸಿತ್ತು.
ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯರನ್ನು ಸಂದರ್ಶಿಸಿ ಒಟ್ಟಾರೆ ತಾವು ಸಂಗ್ರಹಿಸಿದ ಮಾಹಿತಿಯನ್ನು ದಾಖಲೆಯ ರೂಪದಲ್ಲಿ ಒದಗಿಸಿದೆ. ಈ ವರದಿಯನ್ನು ಆದರಿಸಿ ರಾಜ್ಯ ಸರ್ಕಾರಕ್ಕೆ ತಮ್ಮ ವಸ್ತು ನಿಷ್ಠ ಮಾಹಿತಿಯನ್ನು ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಈಗಾಗಲೇ ರಾಜ್ಯ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ಇವರಿಗೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ವರದಿ ಸಿದ್ಧಪಡಿಸಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಸಮಯ ಪಡೆದು ರಾಜ್ಯ ಕಾಂಗ್ರೆಸ್ ನಾಯಕರು ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಿದೆ.