ಬೆಂಗಳೂರು: ಪಕ್ಷ ಹಾಗೂ ಮುಖ್ಯಮಂತ್ರಿಗಳು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ಧ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ನಿಮ್ಮ ಖಾತೆ ಬದಲಾವಣೆಯಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದಕ್ಕೆಲ್ಲ ನನ್ನದು ಒಂದೇ ಉತ್ತರ. ಸಂಪುಟ ವಿಸ್ತರಣೆಯೋ, ಸಂಪುಟ ಪುನಾರಚನೆಯೋ ಎಂಬುದರ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ. ಸಂಪುಟ ವಿಸ್ತರಣೆ ಮಾಡುವ ಪರಮಾಧಿಕಾರ ಅವರಿಗೆ ಇದೆ ಎಂದರು.
ಕೋಟಾ ಶ್ರೀನಿವಾಸ್ ಪೂಜಾರಿ, ಸಚಿವ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೇಂದ್ರ ನಾಯಕರ ಜೊತೆ ಚರ್ಚೆ ನಡೆಸಿ ಅಂತಿಮ ತಿರ್ಮಾನ ಕೈಗೊಳ್ಳುತ್ತಾರೆ. ಇದರ ಬಗ್ಗೆ ನಿನ್ನೆ ದೆಹಲಿ ನಾಯಕರ ಜೊತೆ ಚರ್ಚೆ ಮಾಡಿ ಬಂದಿದ್ದಾರೆ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದರು.
ಕೆಲ ಸಚಿವರಿಗೆ ಕೊಕ್ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅದು ಸ್ವಾಭಾವಿಕ ಅಲ್ಲವೇ? ಪುನಾರಚನೆ ಮತ್ತು ವಿಸ್ತರಣೆ ಬಗ್ಗೆ ಪಕ್ಷದಲ್ಲಿ ಚರ್ಚೆ ಆಗುತ್ತಿರುವುದು ನಿಜ. ಈ ಎಲ್ಲಾ ನಿರ್ಧಾರ ಕೈಗೊಳ್ಳಲು ಸಿಎಂಗೆ ಪರಮಾಧಿಕಾರವಿದೆ ಎಂದು ಪುನರುಚ್ಚರಿಸಿದರು.
ಪಕ್ಷ ಮತ್ತು ಸಿಎಂ ಏನು ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ನಾವೆಲ್ಲ ಬದ್ಧ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದರು. ಶಾಸಕರ ಪ್ರತ್ಯೇಕ ಸಭೆ ವಿಚಾರ ಕುರಿತು ಮಾತನಾಡಿ, ಸ್ವಾಭಾವಿಕವಾಗಿ ಅವರು ನಾಲ್ಕು ಜನ ಸೇರಿದರೆ ನೀವು ಸಭೆ ಅಂತಿರಾ. ನಾವು ಒಟ್ಟಿಗೆ ಕೂತು ಮಾತನಾಡಿದ್ದೀವಿ ಅಷ್ಟೇ ಎಂದರು.