ಬೆಂಗಳೂರು:ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಸಹಾಯ ಮಾಡುತ್ತಿದ್ದ ಕಾನ್ಸ್ಟೇಬಲ್ನನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಡ್ರಗ್ಸ್ ಪ್ರಕರಣದ ಆರೋಪಿಗಳಾದ ಸುನೇಶ್, ಹೇಮಂತ್ ಸೇರಿದಂತೆ ಹಲವು ಆರೋಪಿಗಳಿಗೆ ಸಹಾಯ ಮಾಡುತ್ತಿದ್ದ ಸದಾಶಿವನಗರ ಪೊಲೀಸ್ ಕಾನ್ಸ್ಟೇಬಲ್ ಪ್ರಭಾಕರ್ನನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಡ್ರಗ್ ಕೇಸ್ನಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಪ್ರಮುಖ ಆರೋಪಿಗೆ ಸಹಾಯ ಮಾಡಿದ ಆರೋಪದಲ್ಲಿ ಬಂಧನವಾಗಿದ್ದಾನೆ. ಅತ್ತ ಇದೇ ಪ್ರಕರಣದ ಪ್ರಮುಖ ಆರೋಪಿ ಹೇಮಂತ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರೆ, ಇತ್ತ ಅದೇ ಪ್ರಕರಣದ ಆರೋಪಿಗಳಿಗೆ ಕಾನ್ಸ್ಟೇಬಲ್ ಪ್ರಭಾಕರ ಸಹಾಯ ಮಾಡುತ್ತಿರುವುದರ ಬಗ್ಗೆ ಸಿಸಿಬಿಗೆ ತಿಳಿದಿದೆ. ಈ ಕಾರಣಕ್ಕೆ ಸಿಸಿಬಿ ಅಧಿಕಾರಿಗಳು ಪ್ರಭಾಕರ್ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಸದ್ಯ ಸಿಸಿಬಿ ಕಚೇರಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪ್ರಭಾಕರನನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಭಾಕರ್ ಸದಾಶಿವನಗರ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಟೆಕ್ನಿಕಲ್ನಲ್ಲಿ ಬಹಳ ಚುರುಕಾಗಿದ್ದ. ಇದನ್ನೇ ದುರುಪಯೋಗ ಮಾಡಿಕೊಂಡ ಪ್ರಭಾಕರ್, ಡ್ರಗ್ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಡ್ರಗ್ ರಿಸೀವ್ ಮಾಡಬೇಕಾದ ಲೋಕೇಷನ್, ಯಾರನ್ನು ಎಲ್ಲಿ ಮೀಟ್ ಆಗಬೇಕು, ಪೋಸ್ಟ್ ಮೂಲಕ ಬರುತ್ತಿದ್ದ ಡ್ರಗ್ನ್ನು ಪೊಲೀಸರು ಮತ್ತು ಜನ ಇಲ್ಲದ ಪ್ರದೇಶಗಳನ್ನ ಗುರುತಿಸಿ ಮಾಹಿತಿ ತಿಳಿಸುತ್ತಿದ್ದ. ನಂತರ ಆರೋಪಿ ಹೇಮಂತ್ ಟೀಂ ಪೋಸ್ಟ್ಮೂಲಕ ಬಂದ ಡ್ರಗ್ ಅನ್ನು ಖರೀದಿ ಮಾಡುತ್ತಿದ್ದರು.
ಹಿನ್ನೆಲೆ:ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಯಲ್ಲಿ ಡ್ರಗ್ ಪಾರ್ಸಲ್ ಯಾವಾಗಲೂ ಬರುತ್ತಿತ್ತು. ಅನುಮಾನಗೊಂಡು ಪೊಲೀಸರು ನೋಡಿದಾಗ ಕಳೆದವಾರ ಡ್ರಗ್ ಸಮೇತ ಸುಜಯ್ನನ್ನು ಬಂಧಿಸಿದ್ದರು. ಇದೇ ವೇಳೆ, ಪ್ರಮುಖ ಆರೋಪಿ ಹೇಮಂತ್ ಕೊಡಗಿಗೆ ಎಸ್ಕೇಪ್ ಆಗಿದ್ದ. ಅಲ್ಲಿಂದ ಮೊದಲು ಮಾಜಿ ಸಚಿವನ ಪುತ್ರ ದರ್ಶನ್ಗೆ ಕರೆ ಮಾಡಿದ್ದನು. ಈ ವೇಳೆ ದರ್ಶನ್, ನೀನು ಹಾವೇರಿಗೆ ಬಾ. ತೊಂದರೆಯಾಗದಂತೆ ನೋಡಿಕೊಳ್ಳತ್ತೇನೆಂದು ಹೇಮಂತ್ಗೆ ಭರವಸೆ ನೀಡಿದ್ದ. ನಂತರ ರಾಣೆಬೆನ್ನೂರಿನ ವಸತಿ ಗೃಹದಲ್ಲಿ ಹೇಮಂತ್ಗೆ ದರ್ಶನ್ ಆಶ್ರಯ ನೀಡಿದ್ದ. ಆಶ್ರಯ ನೀಡಿದ ಎಲ್ಲ ಮಾಹಿತಿ ಪಡೆದು ಪೊಲೀಸರು ದರ್ಶನ್ ಲಮಾಣಿಯನ್ನು ಬಂಧಿಸಿದ್ದರು.
ಪೊಲೀಸ್ ಇಲಾಖೆಯಲ್ಲಿ ಇದ್ದು, ಅಕ್ರಮಕ್ಕೆ ಸಹಾಯ ಮಾಡಿದ ಕಾನ್ಸ್ಟೇಬಲ್ ಪ್ರಭಾಕರನನ್ನು ಸಹ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.