ಬೆಂಗಳೂರು: ಸಿಲಿಕಾನ್ ಸಿಟಿ ನಿರ್ಮಾತೃ ಕೆಂಪೇಗೌಡರ ಹೆಸರಲ್ಲಿ ಬಿಬಿಎಂಪಿ ಕೊಡಮಾಡುವ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿಗೆ ನೂರು ಮಂದಿ ಸಾಧಕರು ಭಾಜನರಾದರು. ಈಟಿವಿ ಭಾರತ ಮಾಧ್ಯಮ ಸಂಸ್ಥೆಯ ದಕ್ಷಿಣ ವಿಭಾಗದ ಕೋ ಆರ್ಡಿನೇಟರ್ ಪ್ರವೀಣ್ ಅಕ್ಕಿಯವರು ಕಳೆದ 20 ವರ್ಷಗಳ ಮಾಧ್ಯಮ ಸೇವೆಯ ಫಲವಾಗಿ ಕೆಂಪೇಗೌಡ ಪ್ರಶಸ್ತಿಗೆ ಭಾಜನರಾದರು. ಎಲ್ಲ ಪ್ರಶಸ್ತಿ ಪುರಸ್ಕೃತರಿಗೆ ಸಿಎಂ ಯಡಿಯೂರಪ್ಪ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿದ್ರು.
ಸಾಹಿತಿ ಚಂದ್ರಶೇಖರ ಪಾಟೀಲ್, ಸಿನಿಮಾ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿಗೆ ಆಯ್ಕೆ ಆಗಿದ್ದರೆ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಐಪಿಎಸ್ ಅಧಿಕಾರಿಗಳಾದ ಅನುಚೇತ್, ರೂಪಾ.ಡಿ, ನೃತ್ಯ ವಿಭಾಗದಿಂದ ಮಧುಲಿತ ಮೊಹಪಾತ್ರ ಸೇರಿದಂತೆ ನೂರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಲ್ಲದೆ, ಇದೇ ಮೊದಲ ಬಾರಿಗೆ ಹತ್ತು ಮಹಿಳಾ ಸಾಧಕರಿಗೆ ಲಕ್ಷ್ಮೀದೇವಿ ಪ್ರಶಸ್ತಿ ಹಾಗೂ ಸಮಾಜ ಸೇವೆ ಸಲ್ಲಿಸುತ್ತಿರುವ 5 ಸಂಸ್ಥೆಗಳಿಗೆ ಡಾ.ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ನೀಡಲಾಯಿತು.
ನೂರು ಸಾಧಕರ ಮುಡಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಬಿಬಿಎಂಪಿ ವತಿಯಿಂದ ನಡೆಸುತ್ತಿರುವ ಕೆಂಪೇಗೌಡ ದಿನಾಚರಣೆಯಲ್ಲಿ ಭಾಗಿಯಾಗುತ್ತಿರುವುದು ನನಗೆ ಸಂತಸ ತಂದಿದೆ. ಹಲವು ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರತಿಷ್ಠಿತ ಪ್ರಶಸ್ತಿ ನೀಡುತ್ತಿರುವುದು ಸಾರ್ಥಕ ಕೆಲಸ ಎಂದರು.
ಕೆಂಪೇಗೌಡರ ಡೆವಲಪ್ಮೆಂಟ್ ಬೋರ್ಡ್ ರಚಿಸಿ, ನೂರು ಕೋಟಿ ರೂ. ಮೀಸಲಿಟ್ಟು, ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಹಾಗೂ ಅವರ ಹೆಸರಿನಲ್ಲಿ ಅಭಿವೃದ್ಧಿ ಕೆಲಸ ಮಾಡಲು ಡಿಸಿಎಂ ಆಶ್ವಥ್ ನಾರಾಯಣ್ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.
ಇನ್ನೊಂದು ವರ್ಷದಲ್ಲಿ ಜನರ ಸಲಹೆ ಪಡೆದು, ಬೆಂಗಳೂರಿನ ಚಿತ್ರಣವನ್ನೇ ಬದಲಿಸುವ ಮೂಲಕ ದೇಶದಲ್ಲೇ ಮಾದರಿ ನಗರ ಮಾಡುತ್ತೇನೆ ಎಂದು ಸಿಎಂ ಭರವಸೆ ನೀಡಿದರು. ನಗರದ ಅಭಿವದ್ಧಿಗೆ ಸರ್ಕಾರ ಕಟಿಬದ್ಧವಾಗಿದೆ. ನಗರದ ವಿವಿಧ ಕ್ಷೇತ್ರಗಳ ಗಣ್ಯರಿಗೆ, ಪ್ರಶಸ್ತಿಗೆ ಆಯ್ಕೆಯಾಗಿರುವ ನಮಸ್ಕರಿಸುತ್ತೇನೆ, ಅಭಿನಂದನೆ ಸಲ್ಲಿಸುತ್ತೇನೆ ಎಂದರು.