'ಅಭಿವೃದ್ಧಿ ರಾಜ್ಯವಾಗಿದ್ದ ಕರ್ನಾಟಕ ಕಾಂಗ್ರೆಸ್ ಅವಧಿಯಲ್ಲಿ ದಿವಾಳಿ' ಬೆಂಗಳೂರು: ನಮ್ಮ ಸರ್ಕಾರ ಇದ್ದಾಗ ದೇಶದಲ್ಲೇ ಅಭಿವೃದ್ಧಿ ಹೊಂದಿದ ರಾಜ್ಯ ನಮ್ಮದಾಗಿತ್ತು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಐದಾರು ತಿಂಗಳಲ್ಲಿ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಸರ್ಕಾರದ ಬಳಿ ಬರ ಎದುರಿಸಲು, ಗ್ಯಾರಂಟಿಗಳ ಜಾರಿಗೆ ಹಣ ಇಲ್ಲ. ಸರ್ಕಾರಿ ನೌಕಕರರಿಗೆ ವೇತನ ಪಾವತಿಸಲೂ ಹಣ ಇಲ್ಲ. ಸರ್ಕಾರ ಒಂದು ರೀತಿಯಲ್ಲಿ ದಿವಾಳಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸ ಧವಳಗಿರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ಅವಧಿ ಮುಂದೂಡಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರಿ ನೌಕರರಿಗೆ ನ್ಯಾಯಯುತವಾಗಿ ವೇತನ ಪರಿಷ್ಕರಣೆ ಮಾಡಲು ವೇತನ ಆಯೋಗ ರಚಿಸಿ ಮಧ್ಯಂತರ ಪರಿಹಾರ ನೀಡಲಾಗುತ್ತಿದೆ. ಆದರೆ ಈ ಸರ್ಕಾರ ಕುಂಟು ನೆಪ ಹೇಳಿ ವೇತನ ಆಯೋಗದ ಅವಧಿ ವಿಸ್ತರಿಸಿದೆ. ಸರ್ಕಾರ ಒಂದು ರೀತಿಯಲ್ಲಿ ದಿವಾಳಿಯಾಗಿದ್ದು, ಸರ್ಕಾರ ಬದುಕಿದ್ದೂ ಸತ್ತಂತೆ ಆಗಿದೆ. ಕುಂಟು ನೆಪ ಹೇಳಿಕೊಂಡು ಕಾಂಗ್ರೆಸ್‌ನವರು ಕಾಲಹರಣ ಮಾಡುತ್ತಿದ್ದಾರೆ. ಬಹಳ ಕಾಲ ಇವರನ್ನು ಹೀಗೇ ಬಿಡಲು ಆಗಲ್ಲ, ನಮ್ಮೆಲ್ಲ ಮುಖಂಡರೂ ಚರ್ಚೆ ಮಾಡಿ ಇದೆಲ್ಲದರ ವಿರುದ್ಧ ಹೋರಾಟ ಮಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದರು.
ಇದನ್ನೂ ಓದಿ:KPSC ಪರೀಕ್ಷೆಯಲ್ಲಿ ಮಂಗಳಸೂತ್ರ, ಕಾಲುಂಗುರ ತೆಗೆಸಿದ್ದು ದುರ್ನಡತೆಯ ಪರಮಾವಧಿ: ಜೆಡಿಎಸ್
ಐದು ವರ್ಷ ನಾನೇ ಸಿಎಂ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಹಾಗು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡುತ್ತಿರುವ ಟೀಕೆಗಳಿಗೆ ಕಿಡಿಕಾರಿದ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬೇಜವಾಬ್ದಾರಿ ಹೇಳಿಕೆಗಳಿಗೆ ನಾನು ಉತ್ತರ ಕೊಡಲ್ಲ. ಇಡೀ ಜಗತ್ತೇ ಮೆಚ್ಚಿದ ಪ್ರಧಾನಿಯವರ ಬಗ್ಗೆ ಟೀಕೆ ಮಾಡುವಷ್ಟು ದುರಹಂಕಾರ ಇವರಿಗೆ ಬಂದಿದೆ. ಇದನ್ನು ಜನ ಮೆಚ್ಚುವುದಿಲ್ಲ. ಇವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಆರ್.ಡಿ.ಪಾಟೀಲ್ ಪರಾರಿ ಪ್ರಕರಣ ಗೊತ್ತಿದೆ. ಸಮಗ್ರವಾಗಿ ವಿಚಾರ ಏನು ಅಂತ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ. ಆರೋಪಿಯ ಬಂಧನಕ್ಕೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.
ಡಿ.ಬಿ.ಚಂದ್ರೇಗೌಡರ ನಿಧನಕ್ಕೆ ಸಂತಾಪ:ಇದೇ ವೇಳೆ ಮಾಜಿ ಸಚಿವಡಿ.ಬಿ.ಚಂದ್ರೇಗೌಡರ ನಿಧನಕ್ಕೆ ಯಡಿಯೂರಪ್ಪ ಸಂತಾಪ ಸೂಚಿಸಿದರು. ಚಂದ್ರೇಗೌಡರು ಬಹಳ ಹಿರಿಯರು, ನನ್ನ ಆತ್ಮೀಯ ಸ್ನೇಹಿತರು ಅವರ ನಿಧನದ ಸುದ್ದಿ ಕೇಳಿ ಬಹಳ ದು:ಖ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬದವರಿಗೆ ನೋವು ಭರಿಸುವ ಶಕ್ತಿಯನ್ನು ದೇವರು ಕೊಡಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ರೈತರೇ ಸ್ವಂತ ಖರ್ಚಿನಲ್ಲಿ ಪಂಪ್ಸೆಟ್ಗೆ ಅಗತ್ಯ ಸಲಕರಣೆ ಖರೀದಿ ಮಾಡಬೇಕೆಂಬ ಆದೇಶ: ಈರಣ್ಣ ಕಡಾಡಿ ಖಂಡನೆ