ಬೆಂಗಳೂರು: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET- 2022) ಯನ್ನು ನವೆಂಬರ್ 6ರಂದು ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಇಲಾಖೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ರಾಜ್ಯಾದ್ಯಂತ ಎರಡು ಅವಧಿಗಳಲ್ಲಿ (ಪ್ರತ್ರಿಕೆ-ಮೊದಲ ಅಧಿವೇಶನ ಮತ್ತು ಪತ್ರಿಕೆ-2 ಮಧ್ಯಾಹ್ನ) ನಡೆಯಲಿದೆ.
ಅಧಿಸೂಚನೆಯಂತೆ ನಿಗದಿತ ಶುಲ್ಕ ಪಾವತಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ಇಂದಿನಿಂದ (ಅಕ್ಟೋಬರ್ 25) ತಮ್ಮ ಪ್ರವೇಶ ಪತ್ರವನ್ನು ಇಲಾಖಾ ವೆಬ್‌ಸೈಟ್ https://schooleducation.kar.nic.inನಲ್ಲಿ ಪಡೆಯಬಹುದಾಗಿದೆ. ಅಭ್ಯರ್ಥಿಗಳು ತಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ನೀಡಲಾದ ಸೂಚನೆಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಸೂಚನಾ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು, ಕೂಲಂಕಷವಾಗಿ ಓದಿ ಅರ್ಥೈಸಿಕೊಂಡು, ಅದರಂತೆ ಸಿದ್ಧತೆಯೊಂದಿಗೆ ಪರೀಕ್ಷೆಗೆ ಹಾಜರಾಗುವಂತೆ ತಿಳಿಸಿದೆ. ಆಯಾ ಜಿಲ್ಲೆಯ ಪರೀಕ್ಷಾ ನೋಡಲ್ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನೊಳಗೊಂಡ ಪಟ್ಟಿಯನ್ನೂ ಸಹ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳ ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕೇಂದ್ರೀಕೃತ ದಾಖಲಾತಿ ಘಟಕ ವಿಶೇಷಾಧಿಕಾರಿ ಈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳಿಗೆ ಸೂಚನೆಗಳು:
- ಅಭ್ಯರ್ಥಿಯು ಪರೀಕ್ಷಾ ಕೇಂದ್ರಕ್ಕೆ ಪ್ರತಿ ಅಧಿವೇಶನದ ಪರೀಕ್ಷಾ ಪ್ರಾರಂಭದ ಅವಧಿಗಿಂತ ಒಂದು ಗಂಟೆ ಮುಂಚಿತವಾಗಿ ಹಾಜರಿರುವುದು.
- ಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ನಡೆಸಲಾಗುವುದು, ಎಲ್ಲಾ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಲಾಗುವುದು.
- ಪರೀಕ್ಷೆ ಪ್ರಾರಂಭವಾಗುವ 30 ನಿಮಿಷಗಳ ಮೊದಲು ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಾಗುವುದು.
- ಪರೀಕ್ಷೆ ಪ್ರಾರಂಭವಾದ (ಬೆಳಗ್ಗೆ 9.30, ಮಧ್ಯಾಹ್ನ 2.00 ಗಂಟೆಗೆ) ನಂತರ ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸಲು ಅವಕಾಶವಿಲ್ಲ.
- ಒಮ್ಮೆ ಅಭ್ಯರ್ಥಿಯು ಪರೀಕ್ಷಾ ಕೊಠಡಿ ಪ್ರವೇಶಿಸಿದ ನಂತರ ಪರೀಕ್ಷೆ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರದಿಂದ ಹೊರಗೆ ಹೋಗಲು ಅವಕಾಶವಿರುವುದಿಲ್ಲ.
- ವೇಳಾಪಟ್ಟಿಯಲ್ಲಿ ನಮೂದಿಸಿರುವ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರಿರಬೇಕು.
- ಗೌಪ್ಯತಾ ದೃಷ್ಠಿಯಿಂದ ಅಭ್ಯರ್ಥಿಗಳು ತಪಾಸಣೆಗೆ ಒಳಪಡಬೇಕಾಗಿರುವುದರಿಂದ ಪರೀಕ್ಷೆ ಪ್ರಾರಂಭವಾಗುವ ಅರ್ಧಗಂಟೆ ಮುಂಚೆ ಪರೀಕ್ಷಾ ಕೇಂದ್ರದ ಪ್ರವೇಶದ ಬಾಗಿಲನ್ನು ಮುಚ್ಚಲಾಗುವುದು
ಇತರ ಹಲವು ಮಾಹಿತಿಗಳನ್ನು ಪ್ರಕಟಣೆಯಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ.