ಬೆಂಗಳೂರು: ವಿಧಾನಸಭೆಯಲ್ಲಿ ರಾಮನ ಲೆಕ್ಕ ಕೃಷ್ಣನ ಲೆಕ್ಕ ಭೀಮನ ಲೆಕ್ಕದ ಸ್ವಾರಸ್ಯಕರ ಚರ್ಚೆ ನಡೆಯಿತು. ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಚರ್ಚೆ ಮೇಲಿನ ವೇಳೆ ಮಾತನಾಡುತ್ತಾ, ಚುನಾವಣೆ ಮುಗಿದು ಒಂದು ತಿಂಗಳಲ್ಲಿ ಚುನಾವಣಾ ಆಯೋಗಕ್ಕೆ ಲೆಕ್ಕ ಕೊಡಬೇಕು ಎಂದಿದೆ. ಆದರೆ ಅದು ರಾಮನ ಲೆಕ್ಕ ಭೀಮನ ಲೆಕ್ಕ ಎಂದು ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ಸಿದ್ದರಾಮಯ್ಯ ಮಾತಿಗೆ ಆಕ್ಷೇಪಿಸಿದ ಸಿದ್ದು ಸವದಿ, ಅದು ರಾಮನ ಲೆಕ್ಕ - ಕೃಷ್ಣನ ಲೆಕ್ಕ. ಯಾಕೇ ಭೀಮನ ಲೆಕ್ಕ ಅಲ್ವಾ? ಯಾಕೆ ಭೀಮ ಬೇಡ್ವಾ? ಕೃಷ್ಣನ ಲೆಕ್ಕವಾ? ಓಕೆ. ರಾಮನ ಲೆಕ್ಕ ಕೃಷ್ಣನ ಲೆಕ್ಕ ಬಿಡಿ ಎಂದು ಸಿದ್ದರಾಮಯ್ಯ ತಿಳಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ರಮೇಶ್ ಕುಮಾರ್, ವಾಡಿಕೆ ಇರುವುದೇ ರಾಮ ಕೃಷ್ಣ ಅಂತ ಎಂದು. ರಾಮ ಏಕ ಪತ್ನಿವ್ರತಸ್ತ, ಕೃಷ್ಣ ಭಾಗ್ಯ ಮಲ್ಲ. ಕೃಷ್ಣಂದು ಲೆಕ್ಕ ಇಲ್ಲದ್ದು, ಆ ಕಾರಣಕ್ಕಾಗಿ ರಾಮನ ಲೆಕ್ಕ ಕೃಷ್ಣನ ಲೆಕ್ಕ ಅಂತಾರೆ. ನೀವು ಕೃಷ್ಣನ ಭಕ್ತರು. ಆ ಕಾರಣಕ್ಕಾಗಿ ಕೃಷ್ಣನ ಲೆಕ್ಕ ಅಂತಾನೇ ಹೇಳಿ ಭೀಮನ ಲೆಕ್ಕ ಬೇಡ ಎಂದು ಸಿದ್ದರಾಮಯ್ಯ ಕಾಲೆಳೆದರು.
ಈ ವೇಳೆ ಜೆ.ಎಚ್.ಪಟೇಲ್ ಹೇಳಿದ ಪ್ರಸಂಗ ಉಲ್ಲೇಖಿಸಿದ ಸಿದ್ದರಾಮಯ್ಯ, ಜೆ.ಎಚ್.ಪಟೇಲ್ ಹೇಳುತ್ತಿದ್ದರು, ಏನ್ರಿ ಪಟೇಲರೇ ಹಿಂದೆ ಕಚ್ಚೆ ಹಾಕ್ತಾ ಇದ್ರಿ, ಇವಾಗ ಅಡ್ಡ ಪಂಚೆ ಉಟ್ಕೊತ್ತೀದ್ದೀರಲ್ವಾ ಎಂದು ಕೆಲವರು ಕೇಳುತ್ತಿದ್ದರು. ಎಲ್ಲರೂ ನನಗೆ ಕಚ್ಚೆಹರಕ, ಕಚ್ಚೆಹರಕ ಅನ್ನುತ್ತಿದ್ದರು ಅದಕ್ಕೆ ಕಚ್ಚೇನೆ ಬಿಟ್ಟು ಹಾಕಿ, ಪಂಚೆ ಉಟ್ಟುಕೊಳ್ಳೋಕೆ ಶುರು ಮಾಡಿದೆ ಎಂದು ಹೇಳುತ್ತಿದ್ದರು. ಅದೇ ರೀತಿ, ಯು ಆರ್ ಮ್ಯಾನ್ ಆಫ್ ವುಮನ್ ಎಂದು ಹೇಳುತ್ತಿದ್ದರು. ಅದಕ್ಕೆ ಅವರು, ಸಮಾಜದಲ್ಲಿ ಎರಡು ವರ್ಗದ ಜನರು ಇದ್ದಾರೆ. ಕೆಲವರು, ರಾಮನ ವಂಶಕ್ಕೆ ಸೇರಿದವರು ಇದ್ದಾರೆ ಎಂದು ಸ್ಮರಿಸಿದರು.
ಕೆಲವರು ಕೃಷ್ಣನ ವಂಶಕ್ಕೆ ಸೇರಿದವರು ಇದ್ದಾರೆ. ನಾನು ಕೃಷ್ಣನ ವಂಶಕ್ಕೆ ಸೇರಿದವನು ಏನು ಮಾಡಕಾಗುತ್ತೆ?. ರಾಮನ ವಂಶಕ್ಕೆ ಸೇರಿದವರು ಬೇರೆಯವರು ಇರಬಹುದು. ಅವರು ಕೆಲವರು ಸುಳ್ಳು ಹೇಳ್ತಾರೆ, ರಾಮನ ವಂಶಕ್ಕೆ ಸೇರಿದವರು ಎಂದು. ಆದರೆ ನಾನು ಮಾತ್ರ ಧೈರ್ಯವಾಗಿ ಹೇಳುತ್ತಿದ್ದೇನೆ ನಾನು ಕೃಷ್ಣನ ವಂಶಕ್ಕೆ ಸೇರಿದವನು ಎಂದು ಜೆಎಚ್ ಪಟೇಲ್ ಹೇಳುತ್ತಿದ್ದರು ಎಂದು ಸ್ಮರಿಸಿದರು.