ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಅನ್​ಲಾಕ್ 5 ಜಾರಿ: ದಸರಾ ಆಚರಣೆಗೂ ಮಾರ್ಗಸೂಚಿ ಬಿಡುಗಡೆ - ದಸರಾ ಹಬ್ಬಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ

ನಾಡ ಹಬ್ಬವಾದ ದಸರಾವನ್ನು ಅ.17 ರಿಂದ 26ರ ವರೆಗೆ ಒಟ್ಟು 9 ದಿನಗಳ ಕಾಲ ಆಚರಿಸಲಾಗುತ್ತಿದ್ದು, ವಿಪತ್ತು ನಿರ್ವಹಣಾ ಕಾಯ್ದೆ- 2005ರ ಅಡಿಯಲ್ಲಿ ಸರಳ ರೀತಿಯಲ್ಲಿ ಆಚರಿಸಲು, ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

guidelines for dasara celebrations
ದಸರಾ ಆಚರಣೆಗೆ ಮಾರ್ಗಸೂಚಿ ಬಿಡುಗಡೆ

By

Published : Oct 14, 2020, 7:17 PM IST

Updated : Oct 14, 2020, 8:00 PM IST

ಬೆಂಗಳೂರು: ಕೇಂದ್ರ ಸರ್ಕಾರ ಈಗಾಗಲೇ ಚಟುವಟಿಕೆಗಳನ್ನು ಪ್ರಾರಂಭಿಸಲು ಹಾಗೂ ಕಂಟೈನ್‌ಮೆಂಟ್ ವಲಯಗಳಲ್ಲಿ ಲಾಕ್‌ಡೌನ್ ಅವಧಿಯನ್ನು 31.10.2020ರ ವರೆಗೆ ವಿಸ್ತರಿಸಲು ಅನ್​ಲಾಕ್-5ರ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಅದರಂತೆ ರಾಜ್ಯ ಸರ್ಕಾರವು ಸಹ ಅಕ್ಟೋಬರ್ 1ರಂದು ಕಂಟೈನ್‌ಮೆಂಟ್ ವಲಯಗಳಲ್ಲಿ ಲಾಕ್​ಡೌನ್ ಅವಧಿಯನ್ನು ವಿಸ್ತರಿಸಲು ಮತ್ತು ಕಂಟೈನ್‌ಮೆಂಟ್ ಹೊರಗಿನ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯ ಚಟುವಟಿಕೆಗಳನ್ನು ಪುನರಾಂಭಿಸಲು ಮರು ತೆರವು ಮಾರ್ಗಸೂಚಿಗಳನ್ನು ಜಾರಿ ಗೊಳಿಸುತ್ತಿದ್ದು, ಇವುಗಳು ಅಕ್ಟೋಬರ್ 31ರ ವರೆಗೆ ಜಾರಿಯಲ್ಲಿರುತ್ತದೆ. ಈಗಾಗಲೇ 100 ಜನರಿಗೆ ಅನುಮತಿಸಲಾದ ಪರಿಮಿತಿಯನ್ನು ಮೀರಿ ಸೇರುವಂತಹ ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಮನೋರಂಜನೆ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳು ಮತ್ತು ಇತರೆ ಸಮಾರಂಭಗಳಿಗೆ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ಅನುಮತಿಸಲು ಅವಕಾಶ ಕಲ್ಪಿಸಿದೆ.

ಆದರೆ ರಾಜ್ಯದಲ್ಲಿ ಸೋಂಕು ನಿಯಂತ್ರಣ ಸಿಗದೇ ಇರುವ ಕಾರಣ, ಸೋಂಕು ಹೆಚ್ಚಿನ ರೀತಿಯಲ್ಲಿ ಹರಡದಂತೆ ಈ ಸೋಂಕಿನ ಸರಪಳಿಯನ್ನು ಕತ್ತರಿಸಲು ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ ಇದೆ.

ದಸರಾ ಆಚರಣೆಗೆ ಮಾರ್ಗಸೂಚಿ ಬಿಡುಗಡೆ

ಈ ನಡುವೆ ಈ ಸಾಲಿನ ನಾಡ ಹಬ್ಬವಾದ ದಸರಾವನ್ನು ಅ.17 ರಿಂದ 26ರ ವರೆಗೆ ಒಟ್ಟು 9 ದಿನಗಳ ಕಾಲ ಆಚರಿಸಲಾಗುತ್ತದೆ. ದಸರಾ ಹಬ್ಬವನ್ನು ರಾಜ್ಯದಲ್ಲಿ ಪಾರಂಪರಿಕವಾಗಿ ಪ್ರತಿ ವರ್ಷವೂ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಸಾಂಕ್ರಾಮಿಕ ರೋಗವು ಹರಡುತ್ತಿರುವುದರಿಂದ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ರಾಜ್ಯಾದ್ಯಂತ ಮುಂಬರಲಿರುವ ದಸರಾ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲು, ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿನೊಂದಿಗೆ ಅನುಮತಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಆದೇಶಿಸಿದ್ದಾರೆ. ಈ ಆದೇಶವು ದಸರಾ ಹಬ್ಬದ ಆಚರಣೆ ಮುಗಿಯುವ ವರೆಗೆ ಮಾತ್ರ ಜಾರಿಯಲ್ಲಿರುತ್ತದೆ.

ದಸರಾ ಆಚರಣೆಗೆ ಮಾರ್ಗಸೂಚಿ

  • ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಪ್ರಸಕ್ತ ವರ್ಷದ ನಾಡಹಬ್ಬ ದಸರಾವನ್ನು ಅತ್ಯಂತ ಸರಳವಾಗಿ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸುವುದು.
  • ಜಿಲ್ಲಾಡಳಿತವು ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿ ಆಚರಣೆಗೆ ಮುನ್ನವೇ ನಿಷೇಧಗಳ ಕುರಿತು ವ್ಯಾಪಕವಾಗಿ ಪ್ರಚಾರ ಮಾಡತಕ್ಕದ್ದು.
  • ಮೈಸೂರು ಹೊರತಾಗಿ ರಾಜ್ಯದ ಇತರೆಡೆ ನಡೆಸಲಾಗುವ ದಸರಾ ಆಚರಣೆ ಕಾರ್ಯಕ್ರಮಗಳಲ್ಲಿ 100 ಕ್ಕಿಂತ ಹೆಚ್ಚು ಜನರು ಒಮ್ಮೆಲೆ ಸೇರುವಂತಿಲ್ಲ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
  • ನಾಡಹಬ್ಬ ದಸರಾ ಆಚರಣೆಯಲ್ಲಿ ಸಾಮಾಜಿಕ ಅಂತರವಿಲ್ಲದೆ ನಡೆಸಲಾಗುವ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.
  • ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ತಮ್ಮದೇ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಅಲ್ಲದೇ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆ/ಪ್ರಾಧಿಕಾರಗಳಿಂದ ಹೊರಡಿಸಲಾಗುವ ಎಲ್ಲಾ ಆದೇಶ/ ನಿರ್ದೇಶನ ಹಾಗೂ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
  • ಹಬ್ಬ-ಹರಿದಿನಗಳಲ್ಲಿ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯ ಉಂಟಾಗಲು ಪೂರಕವಾಗಿರುವುದರಿಂದ ದಸರಾ ಹಬ್ಬವನ್ನು ಅದೇ ರೀತಿಯಿಂದ ಆಚರಿಸುವ ಮೂಲಕ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಯೆಗೆ ಯಾವುದೇ ಭಂಗ ಬರದಂತೆ ಕಾಪಾಡುವುದು.
  • ರಾಜ್ಯಾದ್ಯಂತ ಆಚರಿಸಲಾಗುವ ನಾಡಹಬ್ಬ ದಸರಾ ತಯಾರಿ ಮತ್ತು ಚಟುವಟಿಕೆಗಳ ಕುರಿತು ಸಂಬಂಧಿಸಿದ ಪ್ರಾಧಿಕಾರಗಳು ಆಗಿಂದ್ದಾಗ್ಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು.
  • ಈ ಮಾರ್ಗಸೂಚಿಗಳು ನವರಾತ್ರಿ ಹಾಗೂ ದುರ್ಗಾ ಪೂಜೆಯ ಆಚರಣೆಗೂ ಅನ್ವಯವಾಗುತ್ತವೆ.
  • ಅರಮನೆಯ ಆವರಣದಲ್ಲಿ ನಡೆಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮತ್ತು ಸ್ಯಾನಿಟೈಸರ್​ಗಳನ್ನು ಕಡ್ಡಾಯವಾಗಿ ಬಳಸಬೇಕು.
  • ಸಾರ್ವಜನಿಕ ಪ್ರವೇಶ ನಿಷೇಧ ಮಾಡಿದ್ದು, ಬದಲಿಗೆ ವಿಡಿಯೋ ಚಿತ್ರೀಕರಣ ಇರಲಿದ್ದು ಆ ಮೂಲಕ ವೀಕ್ಷಿಸಬಹುದು.
Last Updated : Oct 14, 2020, 8:00 PM IST

ABOUT THE AUTHOR

...view details