ಬೆಂಗಳೂರು :16ನೇ ವಿಧಾನಸಭೆಗೆ ಆಯ್ಕೆಯಾಗಿರುವ 70 ಹೊಸ ಶಾಸಕರಿಗೆ 3 ದಿನಗಳ ಕಾಲ ಪ್ರಕೃತಿ ಚಿಕಿತ್ಸೆ ಮತ್ತು ವಿಧಾನಸಭೆಯ ನಡಾವಳಿ ಕುರಿತ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು. ಟಿ. ಖಾದರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನೆಲಮಂಗಲ ಬಳಿಯಿರುವ ಧರ್ಮಸ್ಥಳದ ನ್ಯಾಚುರೋಪತಿ ಕೇಂದ್ರದಲ್ಲಿ ಜೂನ್ 26ರಿಂದ ಮೂರು ದಿನಗಳ ಕಾಲ ತರಬೇತಿ ಶಿಬಿರ ಆಯೋಜಿಸಲಾಗಿದೆ. ನೂತನ ಶಾಸಕರು ಜೂನ್ 25ರ ಸಂಜೆಯೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು. ಜೂನ್ 26ರ ಬೆಳಗ್ಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಅಂದು ಬೆಳಗ್ಗೆ 10 ಗಂಟೆಯಿಂದ ತರಬೇತಿ ಆರಂಭವಾಗಲಿದ್ದು, ಹಿರಿಯ ಸದಸ್ಯರು ಸಂಸದೀಯ ನಡವಳಿಕೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಜೂನ್ 26ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ ಎಂದು ಸ್ಪೀಕರ್ ಮಾಹಿತಿ ನೀಡಿದರು.
ಉದ್ಘಾಟನಾ ಸಮಾರಂಭಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಹೆಚ್. ಕೆ. ಪಾಟೀಲ್ ಮತ್ತಿತರರು ಭಾಗವಹಿಸಲಿದ್ದಾರೆ. ತರಬೇತಿ ಸಂದರ್ಭದಲ್ಲಿ ಪ್ರತಿ ದಿನ ಸಂಜೆ ಸಂವಾದ ಕಾರ್ಯಕ್ರಮ ಇರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ, ಹೆಚ್. ಡಿ. ಕುಮಾರಸ್ವಾಮಿ, ಡಿಸಿಎಂ ಡಿ.ಕೆ. ಶಿಮಕುಮಾರ್, ಸಚಿವ ಹೆಚ್.ಕೆ. ಪಾಟೀಲ್ ಪಾಟೀಲ್, ಮಾಜಿ ಸಚಿವ ಟಿ.ಬಿ. ಜಯಚಂದ್ರ ಮತ್ತಿತರರು ಒಂದೊಂದು ದಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಳ್ಳಲಿದ್ದಾರೆ. ಹಿರಿಯ ಸದಸ್ಯರಿಂದ ಕಿರಿಯರಿಗೆ ಅನುಭವ ದೊರೆಯಲಿ ಎಂಬ ಕಾರಣಕ್ಕೆ ಸಂವಾದ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ತರಬೇತಿ ಶಿಬಿರದ ಕೊನೆಯ ದಿನ ಎಲ್ಲಾ ಸಚಿವರಿಗೂ ಆಹ್ವಾನ ನೀಡಲಾಗಿದೆ. ಜಂಟಿ ಅವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣ, ಬಜೆಟ್ ಮಂಡನೆ ಅಂಗೀಕಾರ, ಶಾಸನ ರಚನೆ ಮೊದಲಾದ ವಿಚಾರಗಳ ಬಗ್ಗೆ ಹಿರಿಯ ಸದಸ್ಯರು ಮಾರ್ಗದರ್ಶನ ನೀಡಲಿದ್ದಾರೆ. ಬಜೆಟ್ ಬಗ್ಗೆ ಮಾಜಿ ಸಭಾಪತಿ ಬಿ.ಎಲ್. ಶಂಕರ್, ಶಾಸನ ರಚನೆ ಬಗ್ಗೆ ಮಾಜಿ ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರ ಹಕ್ಕು ಬಾಧ್ಯತೆಗಳ ಬಗ್ಗೆ ಮಾಜಿ ಸಚಿವ ಟಿ. ಬಿ. ಜಯಚಂದ್ರ ಮಾತನಾಡಲಿದ್ದಾರೆ ಎಂದರು.