ಬೆಂಗಳೂರು :ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ನಾಳೆ ಆರಂಭವಾಗಲಿದೆ. ಇತ್ತೀಚೆಗಷ್ಟೇ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಗೆದ್ದಿರುವ ಹೊಸ ಅಭ್ಯರ್ಥಿಗಳು ಪರಿಷತ್ ಕಲಾಪದಲ್ಲಿ ಭಾಗಿಯಾಗಲಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಸಭಾಪತಿಗಳು, ಉಪಸಭಾಪತಿಗಳು ಹಾಗೂ ಸಭಾನಾಯಕರನ್ನು ಹೊರತುಪಡಿಸಿದರೆ ಉಳಿದೆಲ್ಲಾ ಪ್ರಮುಖ ಹುದ್ದೆಗಳಿಗೆ ಹೊಸ ಉಸ್ತುವಾರಿಗಳು ನಿಯೋಜಿತರಾಗಿದ್ದು, ಅಧಿಕಾರವಹಿಸಿಕೊಳ್ಳಲಿದ್ದಾರೆ.
ಕಳೆದ ಜ.5ರಿಂದ ಹೊಸ ಸದಸ್ಯರ ಅವಧಿ ಆರಂಭವಾಗಿದೆ. ಈ ವರ್ಷದ ಮೊದಲ ಅಧಿವೇಶನದ ಮೂಲಕವೇ ಅವರು ತಮ್ಮ ಕಾರ್ಯಾರಂಭ ಮಾಡುತ್ತಿದ್ದಾರೆ. 2021ರ ಡಿಸೆಂಬರ್‌ನಲ್ಲಿ ಬಿಜೆಪಿಯ-6 ಮತ್ತು ಓರ್ವ ಬೆಂಬಲಿತ ಪಕ್ಷೇತರ ಸದಸ್ಯ ಸೇರಿ 7 ಸ್ಥಾನ. ಕಾಂಗ್ರೆಸ್ನ-13 ಹಾಗೂ ಜೆಡಿಎಸ್‌ನ 5 ಸದಸ್ಯರ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿತ್ತು.
ಆಡಳಿತ ಪಕ್ಷ ಬಿಜೆಪಿ ಒಟ್ಟು 11 ಕ್ಷೇತ್ರ ಗೆದ್ದು, ತನ್ನ ಸಂಖ್ಯಾಬಲವನ್ನು 37ಕ್ಕೆ ಏರಿಸಿಕೊಂಡಿದೆ. ಒಬ್ಬ ಪಕ್ಷೇತರ ಅಭ್ಯರ್ಥಿಯ ಬೆಂಬಲ ಸಿಗುವುದು ನಿಚ್ಚಳವಾಗಿದೆ. 38 ಸ್ಥಾನದೊಂದಿಗೆ ಸ್ವತಂತ್ರವಾಗಿ ಯಾವುದೇ ನಿರ್ಣಯ ಕೈಗೊಳ್ಳುವ ಅವಕಾಶ ಪಡೆದಿದೆ. ಇದೇ ಉತ್ಸಾಹದಲ್ಲಿ ಈ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ನಿರ್ಧರಿಸಿದೆ.
ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಮಸೂದೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲೇ ಬಿಜೆಪಿ ಮಂಡನೆಗೆ ಮುಂದಾಗಿತ್ತು. ಆದರೆ, ಪ್ರತಿಪಕ್ಷಗಳು ವಿರೋಧಿಸಿದ ಹಿನ್ನೆಲೆ ಮುಂದೂಡಿಕೆ ಮಾಡಿತ್ತು. 25 ಸ್ಥಾನಗಳ ಪೈಕಿ ಬಿಜೆಪಿ 11, ಕಾಂಗ್ರೆಸ್ 11, ಜೆಡಿಎಸ್ 2 ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ವಿಧಾನ ಪರಿಷತ್ನ 11 ಸ್ಥಾನಗಳಲ್ಲಿ ಬಿಜೆಪಿಗೆ ಕೊಡಗು, ಧಾರವಾಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬಳ್ಳಾರಿ, ಶಿವಮೊಗ್ಗ, ಕಲಬುರಗಿ, ಉತ್ತರ ಕನ್ನಡ, ಚಿತ್ರದುರ್ಗ, ಬೆಂಗಳೂರು ನಗರ, ವಿಜಯಪುರದಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ.
11 ಸ್ಥಾನಗಳಾಗಿ ಕಾಂಗ್ರೆಸ್ ಬೀದರ್, ವಿಜಯಪುರ, ದಕ್ಷಿಣ ಕನ್ನಡ, ಕೋಲಾರ-ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಧಾರವಾಡ, ರಾಯಚೂರು, ಬೆಳಗಾವಿ, ಮಂಡ್ಯ, ಮೈಸೂರು, ತುಮಕೂರು ಕ್ಷೇತ್ರದಲ್ಲಿ ಗೆಲುವು ಲಭಿಸಿದೆ.
ವಿಧಾನಪರಿಷತ್ನ 2 ಸ್ಥಾನಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಗೆಲುವು ಸಿಕ್ಕಿದೆ. ಹಾಸನ ಪರಿಷತ್ ಕ್ಷೇತ್ರದಲ್ಲಿ ಡಾ.ಸೂರಜ್ ರೇವಣ್ಣಗೆ ಜಯ ಹಾಗೂ ಮೈಸೂರು ಪರಿಷತ್ ಕ್ಷೇತ್ರದಲ್ಲಿ ಸಿ.ಎನ್.ಮಂಜೇಗೌಡ ಜಯ ಸಾಧಿಸಿದ್ದಾರೆ. ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಇವರ ಬೆಂಬಲ ಬಿಜೆಪಿಗೆ ಲಭಿಸಲಿದೆ.
ಈ ಮೇಲಿನ ಮಾಹಿತಿ ಗಮನಿಸಿದಾಗ ಬಿಜೆಪಿ ತನ್ನ ಹಿಂದಿನ ಬಲಕ್ಕೆ 5 ಸ್ಥಾನ ಹೆಚ್ಚಾಗಿಸಿಕೊಂಡಿದೆ. ಕಾಂಗ್ರೆಸ್ 3 ಸ್ಥಾನ ಕಳೆದುಕೊಂಡರೆ, ಜೆಡಿಎಸ್ 2 ಸ್ಥಾನ ಕಳೆದುಕೊಂಡಿದೆ. ಹೊಸದಾಗಿ ಗೆದ್ದವರನ್ನು ಗಮನಿಸುವುದಾದರೆ ಬೆಂಗಳೂರು ನಗರ ವಿಧಾನ ಪರಿಷತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ಎಸ್.ಗೋಪಿನಾಥ್ ರೆಡ್ಡಿ, ಕೊಡಗು ವಿಧಾನ ಪರಿಷತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ, ಧಾರವಾಡ ದ್ವಿಸದಸ್ಯ ಪರಿಷತ್ ಕ್ಷೇತ್ರದ ಫಲಿತಾಂಶದಲ್ಲಿ ಕಾಂಗ್ರೆಸ್ನ ಸಲೀಂ ಅಹಮದ್, ಚಿತ್ರದುರ್ಗ ವಿಧಾನ ಪರಿಷತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್, ಬಳ್ಳಾರಿ ವಿಧಾನ ಪರಿಷತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್, ಹಾಸನ ವಿಧಾನ ಪರಿಷತ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸೂರಜ್ ರೇವಣ್ಣ, ಉತ್ತರ ಕನ್ನಡದ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್, ಬೀದರ್ ವಿಧಾನ ಪರಿಷತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್.
ಮಂಡ್ಯ ವಿಧಾನ ಪರಿಷತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಜಿ.ದಿನೇಶ್ ಗೂಳಿಗೌಡ, ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಎಲ್.ಅನಿಲ್ ಕುಮಾರ್, ತುಮಕೂರು ವಿಧಾನ ಪರಿಷತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ರಾಜಣ್ಣ, ಬೆಳಗಾವಿ ದ್ವಿಸದಸ್ಯ ಪರಿಷತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ, ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ, ರಾಯಚೂರು ವಿಧಾನ ಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ನ ಶರಣಗೌಡ ಪಾಟೀಲ್ ಬಯ್ಯಾಪುರ, ಮೈಸೂರು ದ್ವಿಸದಸ್ಯ ಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಹಾಗೂ ಜೆಡಿಎಸ್‌ನ ಸಿ.ಎನ್.ಮಂಜೇಗೌಡ, ವಿಜಯಪುರ ದ್ವಿಸದಸ್ಯ ಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಗೌಡ ಪಾಟೀಲ್, ಹಾಗೂ ಬಿಜೆಪಿಯ ಪಿ.ಹೆಚ್.ಪೂಜಾರ ಕಾಣಸಿಗುತ್ತಾರೆ.
ಮರು ಆಯ್ಕೆಯಾದವರನ್ನು ಗಮನಿಸುವುದಾದರೆ ಚಿಕ್ಕಮಗಳೂರು ವಿಧಾನ ಪರಿಷತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ (ಉಪಸಭಾಪತಿ), ಧಾರವಾಡ ದ್ವಿಸದಸ್ಯ ಪರಿಷತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್, ಬೆಂಗಳೂರು ಗ್ರಾಮಾಂತರ ಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ ಗೆಲುವು ಸಾಧಿಸಿದ್ದಾರೆ.
ಅಧಿಕಾರ ಬದಲು :ಆಡಳಿತ ಪಕ್ಷದ ಸದಸ್ಯರಾಗಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನೇ ಬಿಜೆಪಿ ಪಕ್ಷ ಸಭಾನಾಯಕರನ್ನಾಗಿ ಮುಂದುವರಿಸಿದೆ. ಉಪ ಸಭಾಪತಿಗಳಾಗಿ ಸದ್ಯ ಎಂ ಕೆ ಪ್ರಾಣೇಶ್ ಅವರೇ ಮುಂದುವರಿಯುತ್ತಾರೆ. ಆದರೆ, ಆಡಳಿತ ಪಕ್ಷದ ಮುಖ್ಯ ಸಚೇತರಕಾಗಿದ್ದ ಮಹಾಂತೇಶ್ ಕವಟಗಿಮಠ ಗೆದ್ದಿಲ್ಲ. ಹೀಗಾಗಿ, ಅವರ ಸ್ಥಾನಕ್ಕೆ ಹೊಸ ನೇಮಕವಾಗಬೇಕಿದೆ. ಭಾನುವಾರ ಸಂಜೆಯವರೆಗೂ ಬಿಜೆಪಿಯಿಂದ ಯಾವುದೇ ಆದೇಶ ಹೊರ ಬಿದ್ದಿಲ್ಲ.
ರಾಜ್ಯ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರನ್ನಾಗಿ ಬಿಕೆ ಹರಿಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ. ಎಸ್ ಆರ್ ಪಾಟೀಲ್ ಚುನಾವಣೆಗೆ ಸ್ಪರ್ಧಿಸದ ಹಿನ್ನೆಲೆ ಅವರಿಂದ ತೆರವಾಗಿರುವ ಸ್ಥಾನಕ್ಕೆ ಹರಿಪ್ರಸಾದರನ್ನು ಹೈಕಮಾಂಡ್ ಆಯ್ಕೆಮಾಡಿದೆ. ಇನ್ನು ಕಾಂಗ್ರೆಸ್ ಸದಸ್ಯ ಕೆ. ಗೋವಿಂದರಾಜ್ ಅವರನ್ನು ವಿಧಾನ ಪರಿಷತ್ತಿನ ಪ್ರತಿಪಕ್ಷದ ಉಪ ನಾಯಕನ್ನಾಗಿ ನೇಮಿಸಲಾಗಿದೆ.
ಎಂ. ನಾರಾಯಣಸ್ವಾಮಿ ಸ್ಪರ್ಧಿಸದ ಹಿನ್ನೆಲೆ ಅವರ ಸ್ಥಾನವನ್ನು ಪ್ರಕಾಶ್ ರಾಥೋಡ್ಗೆ ನೀಡಲಾಗಿದ್ದು, ಅವರು ವಿಧಾನ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಹುದ್ದೆ ನಿಭಾಯಿಸಲಿದ್ದಾರೆ.
ಜೆಡಿಎಸ್ ಪಕ್ಷದ ಸಚೇತಕರಾಗಿದ್ದ ಎನ್. ಅಪ್ಪಾಜಿಗೌಡ ಸೋತಿರುವ ಹಿನ್ನೆಲೆ ಅವರ ಸ್ಥಾನಕ್ಕೆ ಕೋಲಾರದಿಂದ ಆಯ್ಕೆಯಾಗಿರುವ ಗೋವಿಂದರಾಜು ನೇಮಕಗೊಂಡಿದ್ದಾರೆ. ಇವರೆಲ್ಲರೂ ನಾಳೆಯಿಂದಲೇ ತಮ್ಮ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಹಿರಿಯರ ಅನುಪಸ್ಥಿತಿ :ವಿಧಾನ ಪರಿಷತ್ನಲ್ಲಿ ಬಹುತೇಕ ಹೊಸಮುಖಗಳೇ ಕಾಣಲಿವೆ. ಹಳಬರು ಹಾಗೂ ಅನುಭವಿಗಳಾಗಿದ್ದ ಮಹಾಂತೇಶ್ ಕವಟಗಿಮಠ, ಎಸ್.ಆರ್. ಪಾಟೀಲ್, ಪ್ರತಾಪ್ ಚಂದ್ರ ಶೆಟ್ಟಿ, ಶ್ರೀನಿವಾಸ್ ಮಾನೆ, ಆರ್.ಧರ್ಮಸೇನ, ಬಸವರಾಜ್ ಪಾಟೀಲ್ ಇಟಗಿ, ಕೆ.ಸಿ. ಕೊಂಡಯ್ಯ, ಎನ್. ಅಪ್ಪಾಜಿಗೌಡ, ಸಂದೇಶ್ ನಾಗರಾಜ್ ಕೊರತೆ ಎದ್ದು ಕಾಡಲಿದೆ.